ನರೇಗಾ ಕೂಲಿ ಕಡಿತ, ಸಿಡಿದೆದ್ದ ಕಾರ್ಮಿಕರು

| Published : Jun 23 2025, 11:52 PM IST

ಸಾರಾಂಶ

ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಪಂಚಾಯಿತಿಯಲ್ಲಿ ನರೇಗಾದಡಿ ಕೆಲಸ ಮಾಡಿದ ಕೂಲಿಕಾರರಿಗೆ ಸರ್ಕಾರ ನಿಗದಿಪಡಿಸಿರುವ ವೇತನ ಪಾವತಿಸದೆ ಕಡಿತ ಮಾಡಿ ಹಣ ಜಮೆ ಮಾಡಲಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಕುಷ್ಟಗಿ:ನರೇಗಾ ಕೂಲಿ ಕಡಿತ ಮಾಡಿರುವುದನ್ನು ಖಂಡಿಸಿ ಸಿಡಿದೆದ್ದ ಕೂಲಿ ಕಾರ್ಮಿಕರು ತಪ್ಪಿಸ್ಥರ ವಿರುದ್ಧ ಕ್ರಮಕೈಗೊಂಡು ಕಡಿತ ಮಾಡಿಕೊಂಡಿರುವ ಕೂಲಿ ಜಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಎದುರು ಕರ್ನಾಟಕ ರೈತ ಪ್ರಾಂತ ಸಂಘದ ನೇತೃತ್ವದಲ್ಲಿ ಸೋಮವಾರ ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಸಂಗಮ್ಮ ಗುಳಗೌಡರ, ನಿಡಶೇಸಿ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಪಂಚಾಯಿತಿಯಲ್ಲಿ ನರೇಗಾದಡಿ ಕೆಲಸ ಮಾಡಿದ ಕೂಲಿಕಾರರಿಗೆ ಸರ್ಕಾರ ನಿಗದಿಪಡಿಸಿರುವ ವೇತನ ಪಾವತಿಸದೆ ಕಡಿತ ಮಾಡಿ ಹಣ ಜಮೆ ಮಾಡಲಾಗಿದೆ. ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದ್ಯ ತಾಲೂಕಿನಲ್ಲಿ ಮಳೆ ಅಭಾವದಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡಿವೆ. ರೈತರಿಗೆ ದುಡಿಮೆ ಇಲ್ಲದೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಪಂಚಾಯಿತಿ ಅಧಿಕಾರಿಗಳು ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ಮತ್ತೊಂದೆಡೆ ಮಾಡಿದ ಕೆಲಸಕ್ಕೆ ಸರಿಯಾದ ಕೂಲಿ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕಂದಕೂರು ಪಂಚಾಯಿತಿಯ ನೆರೆಬೆಂಚಿಯಲ್ಲಿ ಕೂಲಿ ಮಾಡಿ 7 ತಿಂಗಳು ಕಳೆದರೂ ವೇತನ ಪಾವತಿಸಿಲ್ಲ ಎಂದು ಆರೋಪಿಸಿದರು.

ಅಕ್ಕಮ್ಮ ಮರೇಗೌಡರ ಮಾತನಾಡಿ, ಅವೈಜ್ಞಾನಿಕವಾಗಿ ಅಂದಾಜು ಪಟ್ಟಿ ಮಾಡಿ ಕಡಿಮೆ ಕೂಲಿ ಪಾವತಿಸುವುದನ್ನು ತಪ್ಪಿಸಬೇಕು. ತಳವಗೇರಾ ಪಂಚಾಯಿತಿಯ ನಿಡಶೇಸಿ, ಹಿರೆನಂದಿಹಾಳ ಪಂಚಾಯಿತಿಯ ಪರಸಾಪುರದ ಕೂಲಿಕಾರರಿಗೆ ಅತಿ ಕಡಿಮೆ ಕೂಲಿ ಪಾವತಿಸಿದ ಪಿಡಿಒಗಳ ಮೆಲೆ ಕಾನೂನು ಕ್ರಮಕೈಗೊಂಡು, ಸರ್ಕಾರ ಘೋಷಿಸಿದ ಕನಿಷ್ಠ ಕೂಲಿ ಪಾವತಿಸಬೇಕು ಎಂದು ಒತ್ತಾಯಿಸಿದರು.

ಕಂದಕೂರ ಪಂಚಾಯಿತಿ ವ್ಯಾಪ್ತಿಯ ನೆರೆಬೆಂಚಿಯ ರೈತರು ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡಿದ ₹ 7,37,462 ಜಮೆ ಮಾಡಿಸಬೇಕು. ಕೆಲಸ ಸ್ಥಳದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮತ್ತು ಸಣ್ಣ ಮಕ್ಕಳ ಪಾಲನೆಗೆ ಕ್ರಮಕೈಗೊಳ್ಳಬೇಕು. ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಎನ್ಎಂಆರ್‌ ತೆಗೆಯಬೇಕು. ಸಾಮರ್ಥಕ್ಕೆ ಅನುಗುಣವಾಗಿ ಕೆಲಸ ನಿಡುವುದು ಸೇರಿದಂತೆ ಹತ್ತಾರು ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಸ್ಥಳಕ್ಕೆ ಇಒ ಭೇಟಿ:

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ತಾಪಂ ಇಒ ಪಂಪಾಪತಿ ಹಿರೇಮಠ, ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಕೂಲಿಕಾರರಿಗೆ ಅಳತೆಗನುಸಾರವಾಗಿ ವೇತನ ಮಾಡಲಾಗುತ್ತದೆ. ಉಳಿದ ಬೇಡಿಕೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ಕ್ರಮಕೈಗೊಂಡು ನ್ಯಾಯ ಒದಗಿಸಲಾಗವುದು ಎಂದು ಭರವಸೆ ನೀಡಿದರು. ಶೀಘ್ರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಕೂಲಿಕಾರರು ಪ್ರತಿಭಟನೆ ಹಿಂಪಡೆದರು.

ಈ ವೇಳೆ ರೈತ ಸಂಘಟನೆಯ ಪ್ರಮುಖರಾದ ಆರ್‌.ಕೆ. ದೇಸಾಯಿ, ಕಾರ್ಯದರ್ಶಿ ಶೇಖರಪ್ಪ ಎಲಿಗಾರ, ವೀರೇಶ ತಳುವಗೇರಾ, ಬಸವರಾಜ ಮೇಳಿ, ರತ್ನಮ್ಮ ನಿಡಶೇಸಿ, ಸಂಗನಗೌಡ ತಳುವಗೇರಾ, ವಿಠ್ಠಲ್‌ ನೆರೆಬೆಂಚಿ, ಶೇಖರಪ್ಪ ನೆರೆಬೆಂಚಿ, ಬಸವರಾಜ ತಳುವಗೇರಾ, ಮಲ್ಲಿಕಾರ್ಜುನ ಸೇರಿದಂತೆ 250ಕ್ಕೂ ಅಧಿಕ ಜನ ಕೂಲಿಕಾರರು ಇದ್ದರು.