ಸಾರಾಂಶ
ಡಂಬಳ: ನರೇಗಾ ಎಂಜಿನಿಯರ್ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಾಂದಾರ ಹೊಳೆತ್ತುವ ಕೆಲಸಕ್ಕೆ ಹೋಗಿದ್ದ ಕೂಲಿ ಕಾರ್ಮಿಕರು ವಾಪಸ್ ಬಂದು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟಿಸಿದ ಪ್ರಸಂಗ ಡಂಬಳದಲ್ಲಿ ನಡೆದಿದೆ.
ಡಂಬಳ ಗ್ರಾಮ ಪಂಚಾಯಿತಿ ನರೇಗಾ ಕಾಮಗಾರಿಯನ್ನು ಜಂತ್ಲಿ- ಶಿರೂರ ಹಳ್ಳದಲ್ಲಿ ಪ್ರಾರಂಭ ಮಾಡಲಾಗಿತ್ತು. ಎರಡು ದಿನದಿಂದ ಬಾಂದಾರ ಹೊಳೆತ್ತಲು ನೂರಾರು ಕಾರ್ಮಿಕರು ಹೋಗಿದ್ದರು. ಆದ್ರೆ ಕಾಮಗಾರಿಯ ಸ್ಥಳಕ್ಕೆ ಆಗಮಿಸಿದ ನರೇಗಾ ಎಂಜಿನಿಯರ್ ಗೋಪಾಲ ಹೊಸಮನಿ ಉದ್ದ ಮತ್ತು ಅಗಲ ಬಾಂದಾರ ಹೊಳೆತ್ತುವುದನ್ನು ನಿಯಮದಂತೆ ಮಾಡಬೇಕು. ಕಡಿಮೆ ಕೆಲಸ ಮಾಡಿದರೆ ನಿಮ್ಮ ಕೂಲಿ ಕಡಿಮೆ ಮಾಡಿ ಪಾವತಿ ಮಾಡುತ್ತೇನೆ ಎಂದು ಕಾರ್ಮಿಕರಿಗೆ ಎಚ್ಚರಿಕೆ ನೀಡಿದ್ದಾರೆ.ಎಂಜಿನಿಯರ್ ಎಚ್ಚರಿಕೆಯಿಂದ ಆಕ್ರೋಶಗೊಂಡ ಕಾರ್ಮಿಕರು ಬಾಂದಾರ ಹೊಳೆತ್ತುವುದನ್ನು ಬಿಟ್ಟು ತಕ್ಷಣ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟಿಸಿದರು. ಹಲವು ಮಹಿಳೆಯರು ಹಾಗೂ ಪುರುಷರು ನಮಗೆ ಕಡ್ಡಾಯವಾಗಿ ನೂರುದಿನ ಕೆಲಸ ನೀಡಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಇಲ್ಲದ ನರೇಗಾ ನಿಯಮಾವಳಿ ನಮ್ಮ ಗ್ರಾಮದಲ್ಲಿ ಮಾತ್ರ ಯಾಕೆ ಎಂದು ಯಲ್ಲವ್ವ ಹೊಂಬಳ, ಅಕ್ಕಮ್ಮ ಬೇವಿನಮರದ, ಗೌವಿಸಿದ್ದವ್ವ ತಳವಾರ, ಯಮನೂರಸಾಬ ನದಾಫ ಸೇರಿದಂತೆ ಎಲ್ಲರೂ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವರ್ಷಕ್ಕೆ ನಮಗೆ ಕಡ್ಡಾಯವಾಗಿ ನೂರು ದಿನ ನರೇಗಾ ಕೆಲಸ ನೀಡಬೇಕು. ನರೇಗಾ ಎಂಜಿನಿಯರ್ ನೀವು ಎಷ್ಟು ಪ್ರಮಾಣದಲ್ಲಿ ಕೆಲಸ ಮಾಡಿರುತ್ತೀರಿ ಅದನ್ನು ಅಳತೆ ಮಾಡಿ ಅಷ್ಟೇ ಕೂಲಿ ಪಾವತಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಎಷ್ಟೋ ಕಾಮಗಾರಿಗಳನ್ನು ಜೆಸಿಬಿ ಹಚ್ಚಿ ಮಾಡಿಸಿದ್ದಾರೆ. ನಾವು ಜೆಸಿಬಿ ಯಂತ್ರವಲ್ಲ ಮನುಷ್ಯರಿದ್ದೇವೆ ಎಂದು ಎಚ್ಚರಿಸಿದರು.ನಂತರ ಪ್ರತಿಭಟನಾ ನಿರತರೊಂದಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ತಿಳಿ ಹೇಳಿದ ನಂತರ ಪ್ರತಿಭಟನೆ ಹಿಂಪಡೆದರು. ಈ ಸಮಯದಲ್ಲಿ ಲಕ್ಷ್ಮವ್ವ ಮಲಿಯಪ್ಪನವರ, ನಾಗಪ್ಪ ತಳವಾರ, ಸೋಮಪ್ಪ ತಳಗೇರಿ, ಮುತ್ತಪ್ಪ ಮೇವುಂಡಿ, ಬೀಬಿಜಾನ ನದಾಫ, ಕಾಶಿಮಸಾಬ ನದಾಫ, ವಿಶಾಲಮ್ಮ ಹಡಪದ, ಬೀಬಿಜಾನ ಕಂಪ್ಲಿಮನಿ, ರೇಣುಕಾ ಆಲೂರ, ಹುಲಿಗೆವ್ವ ದೊಡ್ಡಮನಿ, ಮೈಲೆವ್ವ ಹರಿಜನ, ರವಿ ಆಲೂರ, ಮಲ್ಲಪ್ಪ ಕೊಳ್ಳಾರ, ಜಗದೀಶ ತಳವಾರ ಭಾಗವಹಿಸಿದ್ದರು.
ನೂರಾರು ಕಾರ್ಮಿಕರು ಸಲಿಕಿ, ಗುದ್ದಲಿ ಪ್ಲಾಸ್ಟಿಕ್ ಪುಟ್ಟಿ ಹೊತ್ತು ಗ್ರಾಮ ಪಂಚಾಯಿತಿಗೆ ಆಗಮಿಸಿದ್ದರಿಂದ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು. ನರೇಗಾ ಯೋಜನೆಯಡಿ ದಿನಕ್ಕೆ ₹375 ಕೂಲಿ ನೀಡಲಾಗುತ್ತದೆ. ನರೇಗಾ ನಿಯಮದ ಪ್ರಕಾರ ಕಾರ್ಮಿಕರು ಕೆಲಸ ಮಾಡಬೇಕಾಗುತ್ತದೆ. ಕನಿಷ್ಠ ಕಾಮಗಾರಿ ಪ್ರಗತಿಯಾಗಬೇಕು. ನಾಳೆ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡುತ್ತೇನೆ ಎಂದು ಡಂಬಳ ಗ್ರಾಪಂ ಪಿಡಿಒ ಲತಾ ಮಾನೆ ಹೇಳಿದರು.