ಸಾರಾಂಶ
ನರಸಿಂಹರಾಜಪುರ ತಾಲೂಕಿನಲ್ಲಿ ಜನವರಿಯಿಂದ ಜುಲೈ30ರ ವರೆಗೆ ವಾಡಿಕೆ ಮಳೆ 892 ಮಿ.ಮೀ. ಬೀಳಬೇಕಾಗಿತ್ತು. ಆದರೆ, 1623 ಮಿ.ಮೀ. ಬಿದ್ದಿದ್ದು ಶೇ. 82ರಷ್ಟು ಹೆಚ್ಚುವರಿ ಮಳೆಯಾಗಿದೆ.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ತಾಲೂಕಿನಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆಯವರೆಗೂ ಭಾರೀ ಮಳೆ ಸುರಿದಿದ್ದು ಜನ ಜೀವನ ಅಸ್ತವ್ಯಸ್ತಗೊಂಡು, ನಾಟಿ ಮಾಡಿದ ಭತ್ತದ ಗದ್ದೆ ಮೇಲೆ ಹಳ್ಳದಂತೆ ನೀರು ಹರಿಯುತ್ತಿದ್ದು ರೈತರಿಗೆ ತುಂಬಲಾರದ ನಷ್ಟ ಉಂಟಾಗಿದೆ.ಬಾಳೆ ಗ್ರಾಮ ಪಂಚಾಯಿತಿ ಅರಳಿಕೊಪ್ಪ ಗ್ರಾಮದ ಅಯ್ಯಪ್ಪ ಎಂಬುವರ 1 ಎಕರೆ 20 ಗುಂಟೆಯಲ್ಲಿ ಭತ್ತ ನಾಟಿ ಮಾಡಿದ್ದರು. ಅಂದಾಜು 1 ಎಕರೆ ಮೇಲೆ ಪಕ್ಕದ ಹಳ್ಳದ ನೀರು ಹರಿದಿದ್ದು ಭತ್ತವೇ ನಾಶವಾಗಿದ್ದು, ಅವರಿಗೆ ಸಾವಿರಾರು ರುಪಾಯಿ ನಷ್ಟ ಉಂಟಾಗಿದೆ. ಸ್ಥಳಕ್ಕೆ ಸಹಾಯಕ ಕೃಷಿ ನಿರ್ದೇಶಕ ಗುಬ್ಬಿಗಾ ಗ್ರಾಮ ಪಂಚಾಯಿತಿ ಎಸ್.ಬಿ.ಮಹೇಶ್ ಭೇಟಿ ನೀಡಿ ಪರಿಶೀಲಸಿದ್ದಾರೆ.
ಗುಬ್ಬಿಗಾ ಗ್ರಾಮದ ಲತಾ, ಪ್ರಜ್ವಲ್, ಪ್ರಣಾಮ್ ಎಂಬುವರಿಗೆ ಸೇರಿದ ಗದ್ದೆ ಮೇಲೂ ಹಳ್ಳ ಹರಿದು ಭತ್ತದ ಮೇಲೆ ಮಣ್ಣು ಬಂದು ಕುಳಿತಿದೆ. ಗದ್ದೆ ಅಂಚು ಕುಸಿತ ಕಂಡಿದೆ. ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯಲ್ಲೂ ಹಳ್ಳಗಳು ಉಕ್ಕಿ ಹರಿದು ರೈತರ ಭತ್ತದ ಗದ್ದೆಯಲ್ಲಿ ಮಾಡಿದ್ದ ಸಸಿಗಳು ಕೊಚ್ಚಿಹೋಗಿವೆ. ಕೊಳಲೆ ಗ್ರಾಮದ ಕಿಚ್ಚಿಬ್ಬು ವ್ಯಾಪ್ತಿಯಲ್ಲಿ ನಿಡಗೋಡು ಹಳ್ಳವು ಉಕ್ಕಿ ಹರಿದು ಪಕ್ಕದ ಗದ್ದೆ, ತೋಟಗಳೆಲ್ಲಾ ಜಲಾವೃತವಾಗಿವೆ. ಆಡುವಳ್ಳಿ ಗ್ರಾಪಂ ವ್ಯಾಪ್ತಿ ಗಣಪತಿ ಕಟ್ಟೆ ಬಸ್ಸು ನಿಲ್ದಾಣ ಹಾಳಾಗಿದೆ.ಅಲ್ಲಲ್ಲಿ ಗೋಡೆ ಕುಸಿತ:
ಭಾರೀ ಮಳೆ ಪರಿಣಾಮ ಹಲವು ಗ್ರಾಮಗಳಲ್ಲಿ ಮನೆಗಳ ಗೋಡೆ ಕುಸಿತವಾಗಿದೆ. ರಾವೂರಿನ ರೇಖಾ, ಬೈರಾಪುರದ ನಿಖಿತಾ, ಈಶಮ್ಮ ಎಂಬುವರ ಮನೆಹಾನಿಯಾಗಿವೆ. ಕಡಹಿನಬೈಲು ಗ್ರಾಪಂ ನವಗ್ರಾಮದ ಮೇರಿ ಎಂಬುವರಿಗೆ ಸೇರಿದ ದನದ ಕೊಟ್ಟಿಗೆ ಉರುಳಿ ಬಿದ್ದಿದೆ. ನರಸಿಂಹರಾಜಪುರ ಪಟ್ಟಣದ ವಾರ್ಡ್ ನಂಬರ್ 2ರ ಪುಟ್ಟಪ್ಪ ಎಂಬುವರ ಮನೆ ಮೇಲೆ ಅಡಕೆ ಮರ ಬಿದ್ದು ಶೀಟು ಹಾಳಾಗಿದೆ. ವಗ್ಗಡೆ ಗ್ರಾಮದ ಶೇಷಗೌಡರ, ಸೀತೂರು ಗ್ರಾಪಂ ಕೊನೋಡಿ ಗ್ರಾಮದ ಚಂದ್ರಶೇಖರಗೆ ಸೇರಿದ ಮನೆ ಗೋಡೆ ಉರುಳಿ ಬಿದ್ದಿದೆ. ಅಡಕೆ ತೋಟಗಳಲ್ಲಿ ಗಾಳಿಗೆ ಮರಗಳು ಉರುಳಿ ಬೀಳುತ್ತಿವೆ. ಗಾಳಿಗೆ ಮರಗಳು ಡಿಕ್ಕಿಯಾಗಿ ಎಳೆ ಅಡಕೆ ಕಾಯಿ ಕೆಳಗೆ ಬೀಳುತ್ತಿದೆ. ಜೊತೆಗೆ ಅತಿಯಾದ ಮಳೆಯಿಂದಾಗಿ ಕೊಳೆ ರೋಗದ ಭೀತಿ ಎದುರಾಗಿದೆ. ವಾಡಿಕೆಗಿಂತ ಹೆಚ್ಚಿನ ಮಳೆನರಸಿಂಹರಾಜಪುರ ತಾಲೂಕಿನಲ್ಲಿ ಜನವರಿಯಿಂದ ಜುಲೈ30ರ ವರೆಗೆ ವಾಡಿಕೆ ಮಳೆ 892 ಮಿ.ಮೀ. ಬೀಳಬೇಕಾಗಿತ್ತು. ಆದರೆ, 1623 ಮಿ.ಮೀ. ಬಿದ್ದಿದ್ದು ಶೇ. 82ರಷ್ಟು ಹೆಚ್ಚುವರಿ ಮಳೆಯಾಗಿದೆ. ಜುಲೈ ತಿಂಗಳಲ್ಲಿ ತಾಲೂಕಿನಲ್ಲಿ ವಾಡಿಕೆ ಮಳೆ 491ಮಿ.ಮೀ. ಮಳೆ ಬೀಳಬೇಕಾಗಿತ್ತು. ಆದರೆ, 1132 ಮಿ.ಮೀ. ಮಳೆ ಬಿದ್ದಿದ್ದು 641 ಮಿ.ಮೀ. ಮಳೆ ಹೆಚ್ಚುವರಿಯಾಗಿ ಬಿದ್ದಿದೆ.