ಸಾರಾಂಶ
ಹೊನ್ನಾಳಿ: ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಮಹಾತ್ಮಾ ಗಾಂಧೀಜಿ ಆಶಯದಂತೆ ಎನ್ನೆಸ್ಸೆಸ್ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಬಿ.ಜಿ.ಧನಂಜಯ ಹೇಳಿದರು.
ತಾಲೂಕಿನ ಚಿಕ್ಕೇರೆಹಳ್ಳಿಯ ನೇಗಿಲ ಯೋಗಿಯ ವೇದಿಕೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎನ್ನೆಸ್ಸೆಸ್ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗ್ರಾಮೀಣ ಭಾಗದ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಮತ್ತು ಸರ್ಕಾರ 52 ವಿವಿಧ ಯೋಜನೆಗಳನ್ನು ಸಾರ್ವಜನಿಕರಿಗೆ ನೀಡಿದ್ದು, ಅವುಗಳ ಮಾಹಿತಿಯನ್ನು ಗ್ರಾಮದವರಿಗೆ ತಲುಪಿಸುವ ಕೆಲಸವನ್ನು ಶಿಬಿರಾರ್ಥಿಗಳು ಮಾಡಲಿದ್ದಾರೆ ಎಂದು ತಿಳಿಸಿದರು.
ಸೂಜಿ ತಯಾರು ಮಾಡುವವನೂ ಕೂಡ ತನ್ನ ವಸ್ತುವಿಗೆ ದರ ನಿಗದಿ ಮಾಡುತ್ತಾನೆ ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ರೈತನು ತಾನು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಲಾಗಿಲ್ಲ ರೈತರಿಗೆ ಅನ್ಯಾವಾಗುತ್ತಿದ್ದು, ಈ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಈ ಬಗ್ಗೆ ತೀವ್ರ ಸ್ವರೂಪದ ಹೋರಾಟವಾಗಬೇಕಿದೆ ಎಂದು ರೈತ ಸಮುದಾಯವನ್ನು ಎಚ್ಚರಿಸಿದರು.ಇಂದಿನ ಯುವ ಜನತೆ ತಪ್ಪು ದಾರಿ ತುಳಿಯುತ್ತಿದ್ದು, ಇದು ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಯುವ ಜನತೆ ಅನಗತ್ಯ ವಿಷಯಗಳ ಕಡೆಗೆ ಗಮನಹರಿಸದೇ ರಚನಾತ್ಮಕ ಕೆಲಸಗಳತ್ತ ಗಮನ ಹರಿಸಬೇಕು ಎಂದು ಕಿವಿ ಮಾತು ಹೇಳಿದರು.
ರಾಜಕಾರಣದಲ್ಲಿ ಸಮಾಜಸೇವೆ ಇರಬೇಕೇ ಹೊರತು ಸಮಾಜಸೇವೆಯಲ್ಲಿ ರಾಜಕಾರಣವಿರಬಾರದು ಎಂದು ನೆರೆದಿದ್ದವರ ಮನಮುಟ್ಟುವಂತೆ ವಿವರಿಸಿದರು.ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಡಿ.ಸಿ.ಪಾಟೀಲ್ ಮಾತನಾಡಿ, ನಮ್ಮ ದೇಶವು ಕೃಷಿ ಪ್ರಧಾನ ದೇಶ. ಆದರೆ ಇಂದು ಕೃಷಿಯು ಯಾರಿಗೂ ಬೇಡವಾಗಿದೆ. ಇದು ಗಂಭೀರ ವಿಚಾರವಾಗಿದ್ದು, ಮುಂದೆ ನಮ್ಮೆಲ್ಲರ ಮೇಲೆ ದುಷ್ಪರಿಣಾಮ ಬೀರುವ ಕಾಲ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚೆಗೆ ಕೃಷಿಕರಿಗೆ ಹೆಣ್ಣು ಕೊಡದೇ ಸಾಕಷ್ಟು ಸಂಖ್ಯೆಯಲ್ಲಿ ಹಳ್ಳಿಗಳ ಕಡೆ ಅವಿವಾಹಿತರು ಕಾಣಸಿಗುತ್ತಾರೆ. ಓದಿದ ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದು ಕಷ್ಟ ಸಾಧ್ಯ, ಆದರೆ ಪ್ರತಿಯೊಬ್ಬರಿಗೂ ಕೃಷಿ ಮತ್ತು ಹೈನುಗಾರಿಕೆ ಬದುಕನ್ನು ಕಟ್ಟಿ ಕೊಡಲಿದ್ದು, ಇದರ ಬಗ್ಗೆ ನಾವೆಲ್ಲರೂ ವಿಶೇಷ ಗಮನಹರಿಸಬೇಕಿದೆ ಎಂದರು.ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಕಾಲೇಜನ್ನು ದೇವತಾ ಸ್ವರೂಪಿಯಾಗಿ ಭಾವಿಸಿ ಪೂಜ್ಯತಾ ಭಾವದಿಂದ ಊರಿನ ಮಹಿಳೆಯರು, ಗ್ರಾಮಸ್ಥರು ಧನ್ಯತಾಭಾವ ತೋರಿದ್ದು ಇದು ನಮ್ಮ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದ್ದು, ಈ 7 ದಿನಗಳ ಶಿಬಿರದಲ್ಲಿ ಗ್ರಾಮಸ್ಥರಿಗೆ ನಾವು ಎಷ್ಟರ ಮಟ್ಟಿಗೆ ಅರ್ಹರು ಎಂದು ಶಿಬಿರಾರ್ಥಿಗಳು ನಿಸ್ವಾರ್ಥತೆಯಿಂದ ಶಿಸ್ತು ಸಂಯಮದಿಂದ ಗ್ರಾಮದಲ್ಲಿ ಕೆಲಸ ಮಾಡಿ ತೋರಿಸಬೇಕಿದೆ ಎಂದು ಹೇಳಿದರು.
ಹತ್ತೂರು ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಉಪಾಧ್ಯಕ್ಷೆ ವೀರಮ್ಮ, ಸದಸ್ಯರಾದ ರೂಪಾ, ಬಿ.ಎಂ.ಮೇಘರಾಜ್, ಹನುಮಂತಪ್ಪ, ಬಿ.ಮಹೇಂದ್ರ, ಸಿದ್ದಪ್ಪ, ನಾಗೇಂದ್ರಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೋರಿ ಯೋಗೀಶ್ ಕುಳಗಟ್ಟೆ, ಪತ್ರಕರ್ತ ಎಚ್.ಸಿ.ಮೃತ್ಯುಂಜಯ ಪಾಟೀಲ್, ಯು.ಬಿ.ಜಯಪ್ಪ, ಉಪನ್ಯಾಸಕ ಪುಷ್ಪಲತಾ, ದೊಡ್ಡಪ್ಪ, ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.