ಸಾರಾಂಶ
ಹರಿವರಾಸನಂ ಶತಮಾನೋತ್ಸವ ಸಮಾರಂಭದಲ್ಲಿ ಹೊರಟ್ಟಿ ಅಭಿಮತ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಅಮೆರಿಕ, ಲಂಡನ್ ಸೇರಿದಂತೆ ವಿವಿಧ ದೇಶಗಳಲ್ಲಿ ಅಯ್ಯಪ್ಪಸ್ವಾಮಿ ಭಕ್ತರಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳು ಕಠಿಣ ವ್ರತ ಆಚರಿಸುತ್ತಾರೆ. ಮನುಷ್ಯ ತಪ್ಪು ಮಾಡುವುದು ಸಹಜ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸು ಪರಿವರ್ತೆಯಾಗುತ್ತದೆ. ತಪ್ಪು ತಿದ್ದಿಕೊಂಡು ಸನ್ಮಾರ್ಗದಲ್ಲಿ ನಡೆಯಲು ಇಂಥ ವೃತಾಚರಣೆ ಸಹಕಾರಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಇಲ್ಲಿನ ವಿದ್ಯಾನಗರದ ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಧಾರವಾಡ ಜಿಲ್ಲಾ ಘಟಕ, ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ವತಿಯಿಂದ ಸೋಮವಾರ ಏರ್ಪಡಿಸಿದ್ದ "ಹರಿವರಾಸನಂ " ಶತಮಾನೋತ್ಸವ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಹಿರಿಯರಿಗೆ ಗೌರವ ಕೊಡುವುದು, ದೇವರಲ್ಲಿ ಭಕ್ತಿ ಕಡಿಮೆಯಾಗಿದೆ. ಮುಪ್ಪಿನ ಕಾಲದಲ್ಲಿ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಪ್ರತಿಯೊಬ್ಬರೂ ದೇವರಲ್ಲಿ ನಂಬಿಕೆ ಇಡಬೇಕು. ತಂದೆ ತಾಯಿಯನ್ನು ಗೌರವಿಸಬೇಕು ಎಂದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಆನಂದ ಗುರುಸ್ವಾಮಿ ಅವರು 48 ವರ್ಷಗಳಿಂದ ಮಾಲೆ ಧರಿಸಿ ಅಯ್ಯಪ್ಪಸ್ವಾಮಿ ಸೇವೆ ಮಾಡುತ್ತಿದ್ದಾರೆ. ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಾಲಾಧಾರಿಗಳಿಗೆ ಅನೇಕರು ತೊಂದರೆಗಳು ಎದುರಾಗುತ್ತವೆ. ಆದರೆ, ಸ್ವಾಮಿಯ ಅನುಗ್ರಹದಿಂದ ಭಕ್ತರಿಗೆ ಯಾವುದೇ ಕೆಡುಕಾಗುವುದಿಲ್ಲ ಎಂದು ಹೇಳಿದರು.
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ದಕ್ಷಿಣ ಮಧ್ಯ ಪ್ರಾಂತೀಯ ಕಾರ್ಯದರ್ಶಿ ಡಾ. ಎಸ್.ಎನ್. ಕೃಷ್ಣಯ್ಯ ಮಾತನಾಡಿ, ಅಯ್ಯಪ್ಪನ ಸೇವೆಯಲ್ಲಿ ಶಬರಿಮಲೆ ರಕ್ಷಿಸಿ ಎಂಬ ಧ್ಯೇಯದೊಂದಿಗೆ 2008ರಲ್ಲಿ ಅಯ್ಯಪ್ಪ ಸೇವಾ ಸಮಾಜ ಸ್ಥಾಪನೆಯಾಯಿತು. ದೇಶದ 24 ರಾಜ್ಯಗಳು ಮತ್ತು ವಿವಿಧ ದೇಶಗಳಲ್ಲಿ ಇದರ ಶಾಖೆಗಳಿದ್ದು, ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ಅಯ್ಯಪ್ಪ ಮಾಲಾಧಾರಿಗಳು ಅಯ್ಯಪ್ಪ ಸೇವಾ ಸಮಾಜದಲ್ಲಿ ನೋಂದಣಿ ಮಾಡಿಕೊಂಡು, ಗುರುತಿನ ಚೀಟಿ ಪಡೆದುಕೊಳ್ಳಬೇಕು. ಇದರಿಂದ ಕಷ್ಟಕ್ಕೆ ಸಿಲುಕಿದಾಗ ನೆರವು ನೀಡಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಉಪಾಧ್ಯಕ್ಷ ವಿಎಸ್‌ವಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ ಮಾತನಾಡಿ, "ಹರಿಹರಾತ್ಮಜ ಅಷ್ಟಕಂ " ಕುರಿತು ವಿವರಿಸಿದರು.ಬೆಳಗ್ಗೆ ಲಕ್ಷಾರ್ಚನೆ, ಮಧ್ಯಾಹ್ನ ಅನ್ನದಾನ ಮತ್ತು ಸಂಜೆ ಪಡಿಪೂಜೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಯ್ಯಪ್ಪ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಆನಂದ ಗುರುಸ್ವಾಮಿ, ಡಾ.ಎನ್.ಜಯರಾಮ್, ರಾಜೇಂದ್ರ ವಿ.ಶೆಟ್ಟಿ, ಸಂಪತಕುಮಾರ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))