ಸಾರಾಂಶ
ಸಮಾಜದಲ್ಲಿ ಆರೋಗ್ಯ ಹಾಗೂ ಸ್ವಚ್ಛತಾ ಜಾಗೃತಿಯನ್ನು ಮೂಡಿಸುವುದರಲ್ಲಿ ಎನ್ಎಸ್ಎಸ್ ಪಾತ್ರ ಹಿರಿದು ಎಂದು ಪ್ರಾಂಶುಪಾಲೆ ಹೇಳಿದರು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಸಮಾಜದಲ್ಲಿ ಆರೋಗ್ಯ ಹಾಗೂ ಸ್ವಚ್ಛತಾ ಜಾಗೃತಿಯನ್ನು ಮೂಡಿಸುವುದರಲ್ಲಿ ಎನ್ ಎಸ್ ಎಸ್ ನ ಪಾತ್ರ ಹಿರಿದಾಗಿದೆ ಎಂದು ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ಮಾಳೇಟಿರ ತೃಪ್ತಿ ಬೋಪಣ್ಣ ರವರು ಅಭಿಪ್ರಾಯಪಟ್ಟರು.ಅವರು ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎನ್ ಎಸ್ ಎಸ್ ದಿನಾಚರಣೆಯ ಪ್ರಯುಕ್ತ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಹಾಗೂ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡುತ್ತಾ ಮಾತನಾಡಿದರು.
ಸ್ವಚ್ಛತೆ ಎಂಬುವುದು ನಮ್ಮ ಮನೆಗಳಿಂದಲೇ ಆರಂಭವಾಗಬೇಕು. ಸಮಾಜದಲ್ಲಿ ಪ್ರತಿಯೊಬ್ಬರು ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪಣ ತೊಡಬೇಕು. ರಾಷ್ಟ್ರಾದ್ಯಂತ ಎನ್ ಎಸ್ ಎಸ್ ಘಟಕವು ಸ್ವಯಂ ಸೇವಕರನ್ನು ಹೊಂದಿದ್ದು ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಎನ್ ಎಸ್ ಎಸ್ ಸ್ವಯಂ ಸೇವಕರ ಪಾತ್ರ ಅಪಾರವಾಗಿದೆ ಎಂದರು. ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ ಬಿ. ಡಿ. ರವರು ಆರೋಗ್ಯ ಜಾಗೃತಿ ಹಾಗೂ ಸ್ವಚ್ಛತಾ ಕ್ರಮಗಳ ಕುರಿತು ಮಾತನಾಡಿದರು. ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಶ್ರಮಿಸಿ ಎಂದು ಕರೆ ನೀಡಿದರು. ಎನ್ ಎಸ್ ಎಸ್ ಘಟಕದ ಸ್ವಯಂ ಸೇವಾ ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ತರಗತಿಗಳಿಗೆ ತೆರಳಿ ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರು. ತದನಂತರ ಕಾಲೇಜಿನ ಆವರಣದಲ್ಲಿ, ಮೈದಾನದಲ್ಲಿ ಸ್ವಚ್ಛತೆ ಹಾಗೂ ಶ್ರಮದಾನವನ್ನು ಮಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಬಿ. ಎನ್. ಶಾಂತಿಭೂಷಣ್, ಉಪನ್ಯಾಸಕರು ಹಾಗೂ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.