ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಗಳ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರ ನಡುವಿನ ಬಾಂಧವ್ಯ ವೃದ್ಧಿಗೆ ಪೂರಕವಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ತಾಲೂಕಿನ ವಾಗಟ ಗ್ರಾಮದಲ್ಲಿ ವಿಶ್ವೇಶ್ವರಪುರ ಕಾನೂನು ಮಹಾವಿದ್ಯಾಲಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾನೂನು ಕಾಲೇಜು ವಿದ್ಯಾರ್ಥಿಗಳು ಕೂಡ ದೇಶದ ಭವ್ಯ ಭವಿಷ್ಯದ ಸ್ವಾಸ್ಥ್ಯ ಕಾಪಾಡುವವರಾಗಿದ್ದು, ನೀವೂ ಕೂಡ ಎನ್‌ಎಸ್‌ಎಸ್ ಶಿಬಿರದ ಮೂಲಕ ಗ್ರಾಮೀಣ ಭಾಗದ ಸಂಸ್ಕೃತಿ, ಪರಂಪರೆಯನ್ನು ಅರಿಯಲು ಸಾಧ್ಯವಾಗುತ್ತದೆ. ಪ್ರಮುಖವಾಗಿ ಕಾನೂನು ವಿದ್ಯಾರ್ಥಿಗಳ ಮೇಲೆ ದೊಡ್ಡ ಜವಾಬ್ದಾರಿ ಇದ್ದು, ತಮ್ಮ ವೃತ್ತಿ ಜೀವನದಲ್ಲಿ ಕಕ್ಷಿದಾರ ಯಾವುದಕ್ಕೆ ದೂರು ದಾಖಲಿಸಿದ್ದಾರೆ? ಅವರು ನೀಡಿರುವ ದೂರು ನ್ಯಾಯಸಮ್ಮತವೇ? ಎಂಬ ವಿಚಾರ ಮೊದಲು ತಿಳಿದುಕೊಳ್ಳಬೇಕು. ಕಾನೂನು ವಿದ್ಯಾರ್ಥಿಗಳು ಕಾನೂನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದರು.ಹೊಸಕೋಟೆ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ಮಾತನಾಡಿ, ಇಂದು ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನವಾಗಿದ್ದು, ಮಾನವ ಕಳ್ಳ ಸಾಗಾಣಿಕೆಯಲ್ಲಿ ಭಾರತವು ವಿಶ್ವದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ. ಒಬ್ಬ ಮನುಷ್ಯನನ್ನು ಒತ್ತಾಯ ಪೂರ್ವಕವಾಗಿ ದುಡಿಮೆ, ಲೈಂಗಿಕತೆಗೆ ಬಳಕೆ, ಅಂಗಾಂಗ ಕಳವು ಮಾಡುವುದು ಕೂಡ ಮಾನವ ಕಳ್ಳ ಸಾಗಾಣಿಕೆ ವ್ಯಾಪ್ತಿಗೆ ಬರುತ್ತದೆ. ಮಹಿಳೆಯರನ್ನು ಹಾಗೂ ಮಕ್ಕಳನ್ನು ಭಿಕ್ಷಾಟನೆಗೆ ಬಳಸುವುದೂ ಕೂಡ ಭಾರತದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಹೆಚ್ಚಳವಾಗಲು ಕಾರಣವಾಗಿದೆ ಎಂದರು.
ಪ್ರತಿಯೊಬ್ಬರೂ ನೆಲದ ಕಾನೂನು ಪಾಲನೆ ಮಾಡಬೇಕು, ಕಾನೂನು ಅರಿವು ಮೂಡಿಸಲು ಕಾನೂನು ಅರಿವು ನೆರವು ಕಾರ್ಯಕ್ರಮ ಮಾಡಲಾಗುತ್ತದೆ. ತಾಲೂಕಿನಲ್ಲಿ 22 ಪ್ರಕರಣಗಳಿಗೆ ರಾಜೀ ಸಂಧಾನ ಮೂಲಕ ಇತ್ಯರ್ಥ ಮಾಡಲು ಅನುಮತಿ ದೊರೆತಿದೆ. ರಾಜೀ ಮಾಡುವುದು ಎಂದರೆ ಮಾತುಕತೆ ಮೂಲಕ ಇಬ್ಬರನ್ನೂ ಗೆಲುವಿನ ದಡ ಸೇರಿಸುವ ಕೆಲಸ. ಇದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಾಗುತ್ತದೆ. ಪ್ರತಿ ಪೊಲೀಸ್ ಠಾಣೆ, ತಾಲೂಕು ಕಚೇರಿಯಲ್ಲಿ ವಕೀಲರನ್ನು ನೇಮಕ ಮಾಡಲಾಗುತ್ತದೆ, ಇವರು ಸಮಸ್ಯೆಯಲ್ಲಿರುವ ಜನರಿಗೆ ಕಾನೂನಿನ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.ಪ್ರಾಶುಪಾಲೆ ಸುಧಾ, ಗ್ರಾಪಂ ಅಧ್ಯಕ್ಷೆ ಅಮ್ಮಯಮ್ಮ, ಸಹಕಾರ ರತ್ನ ಪುರಸ್ಕೃತ ಕೋಡಿಹಳ್ಳಿ ಸೊಣ್ಣಪ್ಪ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ವಕೀಲರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ, ಉಪಾಧ್ಯಕ್ಷ ನಾಗರಾಜ್, ಪ್ರ.ಕಾರ್ಯದರ್ಶಿ ನವೀನ್ ಕುಮಾರ್, ಮುಖಂಡ ನರೇಂದ್ರಪ್ಪ ಹಾಜರಿದ್ದರು.