ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ಎಸ್ ಎಸ್ ಎಸ್ ಘಟಕಗಳ ಉದ್ಘಾಟನಾ ಸಮಾರಂಭ ನಡೆಯಿತು.ಕಾಲೇಜಿನ ಆಡಿಟೋರಿಯಂ ನಲ್ಲಿ ನಡೆದ ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆಯ ಲೋಗೋ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿ ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ಗೀತಾಂಜಲಿ ಪಿ ಎ ಮಾತನಾಡಿ, ಎನ್ ಎಸ್ ಎಸ್ನಾನು ಸೇವೆಗೆ ಸಿದ್ದ ಎನ್ನುವುದನ್ನು ಸೂಚಿಸುತ್ತದೆ. ಕಡೆಂಗೋಡ್ಲು ಶಂಕರಭಟ್ಟ ಅವರು ಬರೆದ ಸಾಲುಗಳಾದ ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು ಎನ್ನುವುದನ್ನು ಉಲ್ಲೇಖಿಸಿ ರಾಷ್ಟ್ರೀಯ ಸೇವಾ ಯೋಜನೆಯ ಅವಕಾಶಗಳನ್ನು ಸದಾ ಬಳಸಿಕೊಳ್ಳಬೇಕು. ಇದರಿಂದ ನಮ್ಮ ಜೀವನದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ಗಾಯತ್ರಿ ಎ ಎನ್ ಮಾತನಾಡಿ, ನಿಸ್ವಾರ್ಥವಾಗಿ ನಾವು ಸಮಾಜಕ್ಕೆ ಸೇವೆ ಸಲ್ಲಿಸುತ್ತೇವೆ ಎನ್ನುವುದಾದರೆ ಅದು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಂದ ಸಾಧ್ಯ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಎನ್ ಎಸ್ ಎಸ್ ಸ್ವಯಂ ಸೇವಕರು ಮುಂದಾಗಬೇಕು. ಸಮಾಜದ ಸಮಸ್ಯೆಗಳನ್ನು ನಿವಾರಿಸುವಲ್ಲಿ ತಮ್ಮ ಪ್ರಯತ್ನಗಳನ್ನು ಮಾಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೇಜರ್ ಫ್ರೋ ರಾಘವ ಬಿ ಅವರು. 1969 ರಲ್ಲಿ ಎನ್ ಎಸ್ ಎಸ್ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಬಹಳ ಮುಖ್ಯವಾಗಿದೆ. ದೇಶದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಬಹಳ ಮುಖ್ಯ, ಇಂತಹ ಯುವಜನತೆಗೆ ಎನ್ ಎಸ್ ಎಸ್ ಬಹಳ ಮುಖ್ಯವಾದ ವೇದಿಕೆಯಾಗಿದೆ. ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಬಹಳ ಸಹಕಾರಿಯಾಗಿರುವ ಎನ್ ಎಸ್ ಎಸ್, ಅದೆಷ್ಟೋ ನಾಯಕರನ್ನು ರಾಷ್ಟ್ರಕ್ಕೆ ನೀಡಿದೆ. ನನಗಲ್ಲ ನಿನಗೆ ಎನ್ನುವ ಧ್ಯೇಯವನ್ನಿಟ್ಟುಕೊಂಡು ಸಮಾಜವನ್ನು ತಿದ್ದುವುದರೊಂದಿಗೆ, ಯಾವುದೇ ಆಕಾಂಕ್ಷೆಯನ್ನಿಟ್ಟುಕೊಳ್ಳದೆ ಇತರರಿಗಾಗಿ ಬದುಕುವುದನ್ನು ಬದುಕಿಗೆ ಧಾರೆಯೆರೆಯುವ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರ ಕುರಿತು ಹೆಮ್ಮೆಯೆನಿಸುತ್ತದೆ ಎಂದರು.
ಎನ್ ಎಸ್ ಎಸ್ ಘಟಕಗಳ ಯೋಜನಾಧಿಕಾರಿ ಡಾ. ಶೈಲಶ್ರೀ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನಲ್ಲಿ ಎನ್ ಎಸ್ ಎಸ್ ವತಿಯಿಂದ ನಡೆದ ಹಾಗು ಇನ್ನು ಮುಂದೆ ನಡೆಯಲಿರುವ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಸೇವ ಯೋಜನೆಯ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು.ಬಳಿಕ ಸ್ವಯಂ ಸೇವಕರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಡಾ. ಪ್ರದೀಪ್ ಭಂಡಾರಿ, ಡಾ. ಸೌಮ್ಯಶ್ರಿ ಹಾಗು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕ ಚರಣ್ ಬಲ್ಯದ, ವಿದ್ಯಾರ್ಥಿ ನಾಯಕರಾದ ವರ್ಷ ಟಿ ವಿ, ಮಧುಸೂದನ್ ಬಿ ವಿ, ಮನೋಜ್, ವರ್ಷ ಕೆ ಟಿ ಹಾಜರಿದ್ದರು.ಎನ್ ಎಸ್ ಎಸ್ ಘಟಕಗಳ ಯೋಜನಾಧಿಕಾರಿ ಅಲೋಕ್ ಬಿಜೈ ವಂದಿಸಿದರು.