ಸಾರಾಂಶ
ಸಮಾಜದಲ್ಲಿ ಲಿಂಗತ್ವ ರಾಜಕಾರಣದ ಇರುವಿಕೆಯನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅದು ಯಾವ್ಯಾವ ನೆಲೆಯಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ಗುರುತಿಸುವುದು ಮಹಿಳಾ ಸಮಾನತೆಗೆ ಅಗತ್ಯ.
ಕನ್ನಡಪ್ರಭ ವಾರ್ತೆ ಮೈಸೂರು
ತಾರತಮ್ಯದ ವಿರುದ್ಧ ಹುಟ್ಟುವ ಪ್ರತಿಯೊಂದು ಪ್ರಶ್ನೆಯೂ ಅನೇಕ ಪ್ರಶ್ನೆಗಳಿಗೆ ದಾರಿ ಮಾಡುತ್ತದೆ. ಅಸಮಾನತೆ ನಿವಾರಣೆಗೆ ವೇದಿಕೆ ಕಲ್ಪಿಸುತ್ತದೆ ಎಂದು ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಹಾಗೂ ವಿಶ್ರಾಂತ ಕುಲಪತಿ ಡಾ. ಸಬಿಹಾ ಭೂಮಿಗೌಡ ತಿಳಿಸಿದರು.ನಗರದ ವಸಂತಮಹಲ್ ನಲ್ಲಿರುವ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಮತಾ ಅಧ್ಯಯನ ಕೇಂದ್ರವು ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕಿಯರ ಜೊತೆ ಸಂವಾದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಲಿಂಗತ್ವ ರಾಜಕಾರಣದ ಇರುವಿಕೆಯನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅದು ಯಾವ್ಯಾವ ನೆಲೆಯಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ಗುರುತಿಸುವುದು ಮಹಿಳಾ ಸಮಾನತೆಗೆ ಅಗತ್ಯ. ಲಿಂಗತ್ವ ರಾಜಕಾರಣದ ಸಮಸ್ಯೆಯಿಂದ ಉಂಟಾಗಿರುವ ಮಹಿಳೆಯರ ವಾಸ್ತವ ಸ್ಥಿತಿಯನ್ನು ಅರಿತವರು ಪ್ರಶ್ನಿಸುವುದಕ್ಕೆ ಆರಂಭಿಸುತ್ತಾರೆ ಎಂದರು.ಸಮತಾ ಕೇಂದ್ರ ಸಮಾಜದಲ್ಲಿ ಮಹಿಳೆಯರ ಪರವಾದ ಧ್ವನಿಯನ್ನು ಬಲಗೊಳಿಸಲು ಕೆಲಸ ಮಾಡುತ್ತಿದೆ. ಲೇಖಕಿ ವಿಜಯಾ ದಬ್ಬೆ ಹೆಸರಿನಲ್ಲಿ ಕವಿತೆ, ಕಥಾ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಜನರಲ್ಲಿ ಲಿಂಗತ್ವ ಸೂಕ್ಷ್ಮತೆ ಬೆಳೆಸಲು, ಸ್ತ್ರೀವಾದಿ ಚಿಂತನೆಗೆ ಬಲ ತುಂಬಲು ಪ್ರಯತ್ನಿಸುತ್ತಿದ್ದೇವೆ. ಸಾಧಕಿಯರನ್ನು ಗುರುತಿಸಿ ಪರಿಚಯಿಸುವುದು, ಅವರ ಜೀವನದಿಂದ ಪ್ರೇರಣೆ ಹೊಂದುವ ಕೆಲಸ ಆಗಬೇಕು ಎಂದು ಅವರು ಹೇಳಿದರು. ಮನಸ್ಥಿತಿ ರೂಢಿಸಿಕೊಳ್ಳಬೇಕುಮಹಿಳಾ ದಿನಾಚರಣೆಯ ಪ್ರಸ್ತುತತೆ ಕುರಿತು ಸಮತಾ ಅಧ್ಯಯನ ಕೇಂದ್ರದ ಧರ್ಮದರ್ಶಿ ಡಾ.ಎಚ್.ಎಂ. ಕಲಾಶ್ರೀ ಮಾತನಾಡಿ, ಸಂವಿಧಾನ ಸಮಾನತೆ ಆಶಯವನ್ನು ಪ್ರಸ್ತಾಪಿಸುತ್ತದೆ. ಆದರೆ, ಎಲ್ಲವನ್ನು ಅದರ ಮೂಲಕವೇ ಗಳಿಸಲು ಸಾಧ್ಯವಿಲ್ಲ. ಸಮಾಜದಲ್ಲಿನ ಜನರ ದೃಷ್ಟಿಕೋನ ಬದಲಾಗಬೇಕು. ಉತ್ತಮ ಕೆಲಸವನ್ನಷ್ಟೇ ಮಾಡುತ್ತೇವೆ ಎಂಬ ಮನಸ್ಥಿತಿ ರೂಢಿಸಿಕೊಳ್ಳಬೇಕು. ಆಗ ಮಹಿಳಾ ಸಮಾನತೆ ಸಾಧ್ಯ ಎಂದರು.ಹೆಣ್ಣಿಲ್ಲದೆ ಗಂಡಿಲ್ಲ, ಗಂಡಿಲ್ಲದೆ ಹೆಣ್ಣಿಲ್ಲ ಎಂಬ ಅರಿವು ಇಬ್ಬರಿಗೂ ಇರಬೇಕು. ಒಬ್ಬರೇ ಎಲ್ಲವನ್ನು ನಿಭಾಯಿಸುತ್ತೇವೆ ಎಂಬ ಹಠವೂ ಬೇಡ. ಜೊತೆಯಾಗಿ ಸಾಗುವುದು, ಎಲ್ಲರನ್ನು ಒಳಗೊಳ್ಳುವ ಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಮಹಿಳೆಯರು ಎರಡನೇ ದರ್ಜೆ ಎಂಬ ಸ್ಥಿತಿಯನ್ನು ನಿವಾರಿಸಲು ಯುವಜನರು ಮುಂದಾಗಬೇಕು ಎಂದು ಅವರು ಕರೆ ನೀಡಿದರು.ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಜಿ.ಕೆ. ಪ್ರೇಮಾ ಅವರು ತಮ್ಮ ಸಾಧನೆ ಕುರಿತು ಮಾತನಾಡಿದರು. ಸಿಟಿಇ ಪ್ರಾಂಶುಪಾಲೆ ಎಚ್.ಎನ್. ಗೀತಾಂಬ, ಡಯಟ್ ಇಎಲ್ ಟಿಸಿ ಬೋಧಕಿ ಮೋಳಿ ವರ್ಗೀಸ್, ಸಿಟಿಇ ರೀಡರ್ ಡಿ.ಆರ್. ಅಮಿತ್ ಇದ್ದರು.------ಕೋಟ್...ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಜಿ.ಕೆ. ಪ್ರೇಮಾ ಮಾತನಾಡಿ, ಸಮುದಾಯದಲ್ಲಿ ಬೇರೂರಿರುವ ಅನಗತ್ಯ ಅನಿಷ್ಟ ಪದ್ಧತಿಗಳು ಹೆಣ್ಣು ಮಕ್ಕಳನ್ನು ಹೆಚ್ಚು ಶೋಷಿಸುತ್ತವೆ. ಇದನ್ನು ತೊಲಗಿಸಲು ಅಲ್ಲಿನ ಸಂಸ್ಕೃತಿಯ ಆಳವಾದ ಪರಿಚಯವನ್ನು ಹೊಂದಿ ಚರ್ಚಿಸುವುದು ಅಗತ್ಯ. ಸಮುದಾಯದೊಳಗಿನ ಮಕ್ಕಳು ಸೂಕ್ತವಾದ ಶಿಕ್ಷಣ ಪಡೆದಾಗ ಈ ಕಾರ್ಯಕ್ಕೆ ವೇಗ ದೊರೆಯುತ್ತದೆ.- ಡಾ.ಜಿ.ಕೆ. ಪ್ರೇಮಾ, ಸಹಾಯಕ ಪ್ರಾಧ್ಯಾಪಕಿ, ಸಹ್ಯಾದ್ರಿ ಕಾಲೇಜು