ಸಾರಾಂಶ
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ । ರಕ್ತದಾನ ಶಿಬಿರ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣರಕ್ತದ ಬೇಡಿಕೆ ಹೆಚ್ಚಾಗಿದ್ದು ರಕ್ತದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಪ್ರತಿ ದಿನ ರಕ್ತದ ಅವಶ್ಯಕತೆ ಇದ್ದು ರಕ್ತದಾನಿಗಳು ಹೆಚ್ಚು ರಕ್ತ ನೀಡುವ ಮೂಲಕ ರೋಗಿಗಳ ನೆರವಿಗೆ ಧಾವಿಸಬೇಕು ಎಂದು ಸಿವಿಕೆಎಲ್ ಸಂಸ್ಥೆಯ ಮುಖ್ಯಸ್ಥ ಲೋಹಿತ್ ಹೇಳಿದರು.
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಡಾ.ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಸಿವಿಕೆಎಲ್ ಸ್ವಯಂ ಸೇವಾ ಸಂಸ್ಥೆ ಮತ್ತು ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ರಕ್ತ ಅವಶ್ಯಕತೆ ಇರುವವರ ಬೇಡಿಕೆ ಹೆಚ್ಚಾಗುತ್ತಿದೆ. ಪ್ರತಿ ತಿಂಗಳು ಚನ್ನರಾಯಪಟ್ಟಣದ ವಿವಿಧ ರೋಗಿಗಳಿಗೆ ೩೦೦ ರಿಂದ ೩೫೦ ಮಂದಿಗೆ ರಕ್ತದ ಅವಶ್ಯಕತೆ ಇದೆ. ಆದರೆ ಪ್ರತಿ ಶಿಬಿರದಲ್ಲಿ ನಮಗೆ ಕೇವಲ ೫೦ ರಿಂದ ೧೦೦ ಮಂದಿಯ ರಕ್ತ ಸಂಗ್ರಹಣೆ ಮಾಡುವುದು ಕಷ್ಟಕರವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಕ್ತದಾನ ಮಾಡಿದರೆ ಅದನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಜನಸಾಮಾನ್ಯರಲ್ಲಿದೆ. ರಕ್ತ ಸಂಗ್ರಹಣೆ ಮಾಡಿದ ನಂತರ ಅದನ್ನು ಸುರಕ್ಷಿತ ಮಾಡುವುದಕ್ಕಾಗಿ ಒಂದಿಷ್ಟು ಶುಲ್ಕ ವಿಧಿಸುತ್ತೇವೆ. ಅದನ್ನು ಬಿಟ್ಟರೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಕೇಂದ್ರಗಳು ರಕ್ತವನ್ನು ಮಾರಾಟ ಮಾಡುವುದಿಲ್ಲ. ರೋಗಿಗಳ ಹಿತ ದೃಷ್ಟಿಯಿಂದ ರಕ್ತದಾನ ಮಾಡುವವರ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಬೇಕು ಎಂದು ಮನವಿ ಮಾಡಿದರು.
ವಂದೇ ಮಾತರಂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗಣ್ಣ ಜೈ ಹಿಂದ್ ಮಾತನಾಡಿ, ‘ನಮ್ಮ ಹುಟ್ಟು ಕುಟುಂಬಕ್ಕೆ ಮಾತ್ರ ಗೊತ್ತಾಗುತ್ತದೆ. ಆದರೆ ಸಾವು ದೇಶಕ್ಕೆ ಗೊತ್ತಾಗಬೇಕು. ಆ ರೀತಿ ಬಾಳಿ ಬದುಕಬೇಕು ಎಂದು ತೋರಿಸಿಕೊಟ್ಟವರು ಪುನೀತ್ ರಾಜ್‌ಕುಮಾರ್ ಅವರ ಆದರ್ಶವನ್ನು ಪಾಲಿಸಿದಾಗ ಮಾತ್ರ ಸಾಧ್ಯ. ಹಾಗಾಗಿ ಪುನೀತ್ ರಾಜಕುಮಾರ್ ಅಂಗವಾಗಿ ಪ್ರತಿ ವರ್ಷ ರಕ್ತದಾನಿಗಳ ಸಂಖ್ಯೆ ಹೆಚ್ಚಾಗುವ ಮೂಲಕ ರೋಗಿಗಳ ಪ್ರಾಣ ಉಳಿಸುವ ಕಾರ್ಯವಾಗಬೇಕು’ ಎಂದು ಮನವಿ ಮಾಡಿದರು.ಹಿರಿಯ ಪತ್ರಕರ್ತ ಹಾಗೂ ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಪುಟ್ಟಣ್ಣ ಗೋಕಾಕ್, ತಾಲೂಕು ರೈತ ಸಂಘದ ಅಧ್ಯಕ್ಷ ಸಿ.ಜಿ. ರವಿ, ಚನ್ನರಾಯಪಟ್ಟಣ ಸ್ವಯಂಪ್ರೇರಿತ ರಕ್ತನಿಧಿ ಕೇಂದ್ರದ ನಿರ್ದೇಶಕ, ಭರತ್ ಕುಮಾರ್, ರೈತ ಮುಖಂಡ ಶ್ರೀನಿವಾಸ್ ಶೆಟ್ಟಿಹಳ್ಳಿ ಹಾಜರಿದ್ದರು.
ಚನ್ನರಾಯಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಡಾ.ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಸಿವಿಕೆಎಲ್ ಸ್ವಯಂ ಸೇವಾ ಸಂಸ್ಥೆ ಮತ್ತು ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತ ಕೇಂದ್ರದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.