ನಾಟಕಗಳು ನೀತಿ ಬೋಧಿಸುತ್ತವೆ: ಬಸ್ಸುಗೌಡ ಬಿಳ್ಹಾರ

| Published : Mar 19 2024, 12:47 AM IST

ಸಾರಾಂಶ

ಯಾದಗಿರಿ ಸಮೀಪದ ಅಬ್ಬೆತುಮಕೂರಿನಲ್ಲಿ ನಡೆದ ಜಾತ್ರಾ ಮಹೋತ್ಸವದ ಎರಡನೇ ದಿನದ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ದಿಮೆದಾರ ಬಸ್ಸುಗೌಡ ಬಿಳ್ಹಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಾಟಕಗಳನ್ನು ನೋಡುವುದರಿಂದ ಕೇವಲ ಮನೋರಂಜನೆ ಮಾತ್ರವಲ್ಲ, ನಾಟಕಗಳು ನೀತಿಯನ್ನು ಬೋಧಿಸುತ್ತವೆ ಎಂದು ಉದ್ದಿಮೆದಾರ ಬಸ್ಸುಗೌಡ ಬಿಳ್ಹಾರ ಹೇಳಿದರು.

ಸಮೀಪದ ಅಬ್ಬೆತುಮಕೂರಿನಲ್ಲಿ ನಡೆದ ಜಾತ್ರಾ ಮಹೋತ್ಸವದ 2ನೇ ದಿನದ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಂಗ ಭೂಮಿಯ ಮೇಲೆ ಪ್ರದರ್ಶನಗೊಳ್ಳುವ ನಾಟಕಗಳು ಉತ್ತಮವಾದ ವಿಚಾರಗಳಿಂದ ಕೂಡಿರುತ್ತವೆ. ನಾಟಕಗಳಲ್ಲಿನ ಒಳ್ಳೆಯ ಅಂಶ ಅಳವಡಿಸಿಕೊಂಡರೆ ಜೀವನ ಉದ್ಧಾರವಾಗಲು ಸಾಧ್ಯವಾಗುತ್ತದೆ ಎಂದರು.

ಖ್ಯಾತ ವೈದ್ಯ ಡಾ.ವೀರೇಶ ಜಾಕಾ ಮಾತನಾಡಿ, ಅಬ್ಬೆತುಮಕೂರಿನ ಶ್ರೀವಿಶ್ವರಾಧ್ಯರ ಜಾತ್ರೆ ವರ್ಷದಿಂದ ವರ್ಷಕ್ಕೆ ಆಗಮಿಸುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಲ್ಲಿಗೆ ಬರುವುದರಿಂದ ಮನೋಕಾಮನೆಗಳು ಈಡೇರುತ್ತವೆ ಎಂಬ ಭಾವನೆಯಿಂದ ಜನ ಸಾಗರ ರೂಪದಲ್ಲಿ ಆಗಮಿಸುತ್ತದೆ ಎಂದು ಹೇಳಿದರು.

ಪೀಠಾಧಿಪತಿಗಳು ತಮ್ಮ ಸಂಕಲ್ಪದಂತೆ ಶ್ರೀಮಠವನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಪ್ರವರ್ಧಮಾನಗೊಳಿಸುತ್ತಿದ್ದಾರೆ. ಅಂತೆಯೇ ಇಲ್ಲಿ ಅನೇಕ ಶಾಲಾ-ಕಾಲೇಜುಗಳು ತಲೆ ಎತ್ತಿ ನಿಂತಿದ್ದು, ಸಾವಿರಾರು ವಿದ್ಯಾರ್ಥಿಗಳು ಜ್ಞಾನ ಪಡೆದು ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂದರು.

ಖ್ಯಾತ ವೈದ್ಯ ಡಾ. ಶರಣಬಸವ ಎಲ್ಹೇರಿ ಮಾತನಾಡಿ, ವಿಶ್ವರಾಧ್ಯರ ಕ್ಷೇತ್ರ ಎಂದರೆ ಅದು ಭಕ್ತಿ ಭಾವ ಮೂಡಿಸುವ ಶ್ರದ್ಧಾ ಕೇಂದ್ರವೆಂದು ಭಾವಿಸುವ ಜನ ಕರ್ನಾಟಕ ಮಾತ್ರವಲ್ಲ ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು ಪುನೀತರಾಗುತ್ತಾರೆ ಎಂದರು.

ಈ ಮಠದಲ್ಲಿ ಜಾತಿ ಮತಗಳ ಬೇಧ-ಭಾವವಿಲ್ಲ. ಎಲ್ಲರನ್ನೂ ಒಂದೇ ಎಂಬ ಭಾವದಲ್ಲಿ ಕಾಣಲಾಗುತ್ತದೆ. ಇಲ್ಲಿನ ಅನ್ನದಾಸೋಹ ನಿರಂತರವಾಗಿ ಜರುಗುತ್ತಿದ್ದು, ಹಸಿದ ಹೊಟ್ಟೆ ತಣಿಸುವ ಪುಣ್ಯ ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆ ಮೇಲೆ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿ, ಮಹಾದೇವರೆಡ್ಡಿ ಗೌಡರೆಡ್ಡಿ ಬಿಳ್ಹಾರ, ಡಾ. ಸುಭಾಶ್ಚಂದ್ರ ಕೌಲಗಿ ಡಾ. ಶ್ರುತಿ ಎಲ್ಹೇರಿ, ಡಾ. ವಿದ್ಯಾ ಬಿಳ್ಹಾರ ಇದ್ದರು.