ಮೊದಲ ತಂಡದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮೀ ಮತ್ತು ಕಾವೇರಿ ಆನೆಗಳು

ಕನ್ನಡಪ್ರಭ ವಾರ್ತೆ ಮೈಸೂರು

ಗೌರಿ- ಗಣೇಶ ಹಬ್ಬದ ಶುಭ ಸಂದರ್ಭದಲ್ಲೇ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು 3 ಆನೆಗಳು ಮೈಸೂರಿಗೆ ಆಗಮಿಸಿವೆ.

ಎರಡನೇ ತಂಡದಲ್ಲಿ ಭಾನುವಾರ ಸಂಜೆ ಕಾಡಿನಿಂದ ಲಾರಿಗಳಲ್ಲಿ ಆಗಮಿಸಿದ 3 ಆನೆಗಳಿಗೆ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಲಾಯಿತು.

ದುಬಾರೆ ಆನೆ ಶಿಬಿರದಿಂದ 44 ವರ್ಷದ ಸುಗ್ರೀವ, ದೊಡ್ಡಹರವೆ ಆನೆ ಶಿಬಿರದಿಂದ 50 ವರ್ಷದ ರೂಪಾ ಮತ್ತು ರಾಮಪುರ ಆನೆ ಶಿಬಿರದಿಂದ ಚೈತ್ರಾ ಆನೆ ಎರಡನೇ ತಂಡದಲ್ಲಿ ಆಗಮಿಸಿವೆ. ಈ ಮೂರು ಆನೆಗಳು ಈಗಾಗಲೇ ದಸರೆಯಲ್ಲಿ ಪಾಲ್ಗೊಂಡಿರುವ ಅನುಭವ ಹೊಂದಿವೆ.

ಪೂಜೆಯೊಂದಿಗೆ ಸ್ವಾಗತ

ಮೈಸೂರು ಅರಮನೆ ಜಯಮಾರ್ತಾಂಡ ದ್ವಾರದ ಬಳಿ 3 ಆನೆಗಳನ್ನು ಸಾಲಾಗಿ ನಿಲ್ಲಿಸಿ ಅರ್ಚಕ ಪ್ರಹ್ಲಾದ್‌ ರಾವ್ ಆನೆಗಳ ಪಾದ ತೊಳೆದು, ಅರಿಶಿನ- ಕುಂಕುಮ ಹಚ್ಚಿ ಸೇವಂತಿಗೆ ಹೂ ಮುಡಿಸಿ ಬಳಿಕ ವಿಶೇಷ ಪೂಜೆ ಸಲ್ಲಿಸಿದರು. ನಂತರ ಎಲ್ಲಾ ಆನೆಗಳಿಗೂ ಕಬ್ಬು- ಬೆಲ್ಲ, ಗರಿಕೆ, ಮೋದಕ, ಕಡುಬು, ಪಂಚ ಕಜ್ಜಾಯ ನೀಡಲಾಯಿತು.

ಎರಡನೇ ತಂಡದಲ್ಲಿ ಆಗಮಿಸಿದ ಮೂರು ಆನೆಗಳನ್ನು ಮಹೇಂದ್ರ ಮತ್ತು ಏಕಲವ್ಯ ಆನೆಗಳು ಜೊತೆಯಾಗಿ ಅರಮನೆಗೆ ಬರ ಮಾಡಿಕೊಂಡವು.

ಬಳಿಕ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಆರ್ ಎಫ್ಒ ಯಶ್ಮಾ ಮಾಚಮ್ಮ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಎಸಿಪಿಗಳಾದ ಚಂದ್ರಶೇಖರ್, ರಾಜೇಂದ್ರ ಅವರು ಪುಷ್ಪಾರ್ಚನೆ ಮೂಲಕ ಆನೆಗಳನ್ನು ಅರಮನೆಗೆ ಸ್ವಾಗತಿಸಿದರು.