ಬೀದರ್‌ ಜಿಲ್ಲೆಗೆ ನೂಪುರ ನೃತ್ಯ ಅಕಾಡೆಮಿಯ ಕೊಡುಗೆ ಅಪಾರ: ಹಿರಿಯ ರಂಗ ಕಲಾವಿದ ಶ್ರೀನಿವಾಸ ಜಿ.ಕಪ್ಪಣ್ಣ

| Published : Feb 03 2025, 12:30 AM IST

ಬೀದರ್‌ ಜಿಲ್ಲೆಗೆ ನೂಪುರ ನೃತ್ಯ ಅಕಾಡೆಮಿಯ ಕೊಡುಗೆ ಅಪಾರ: ಹಿರಿಯ ರಂಗ ಕಲಾವಿದ ಶ್ರೀನಿವಾಸ ಜಿ.ಕಪ್ಪಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರಿನ ಕಲಾವಿದರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಪ್ರದರ್ಶನ ಮಾಡಲು ಅವಕಾಶ ಮಾಡುವ ಅಗತ್ಯವಿದೆ. ಇದರಿಂದ ಅವರಲ್ಲಿರುವ ಕೀಳರಿಮೆ ದೂರಾಗುತ್ತದೆ ಎಂದು ಹಿರಿಯ ರಂಗ ಕಲಾವಿದರಾದ ಶ್ರೀನಿವಾಸ ಜಿ.ಕಪ್ಪಣ್ಣ ಹೇಳಿದರು.

ಬೆಳ್ಳಿ ಮಹೋತ್ಸವ । ಕಲಾವಿದರಿಗೆ ಅವಕಾಶದ ಅಗತ್ಯವಿದೆ । ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಬೀದರ್

ಬೀದರಿನ ಕಲಾವಿದರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಪ್ರದರ್ಶನ ಮಾಡಲು ಅವಕಾಶ ಮಾಡುವ ಅಗತ್ಯವಿದೆ. ಇದರಿಂದ ಅವರಲ್ಲಿರುವ ಕೀಳರಿಮೆ ದೂರಾಗುತ್ತದೆ ಎಂದು ಹಿರಿಯ ರಂಗ ಕಲಾವಿದರಾದ ಶ್ರೀನಿವಾಸ ಜಿ.ಕಪ್ಪಣ್ಣ ಹೇಳಿದರು.

ಇಲ್ಲಿನ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಹಮ್ಮಿಕೊಂಡ ನೂಪುರ ನೃತ್ಯ ಅಕಾಡೆಮಿಯ ಬೆಳ್ಳಿ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಜಿಲ್ಲೆಯ ಕಲಾವಿದರಲ್ಲೂ ಅಪಾರವಾದ ಪ್ರತಿಭೆಯಿದೆ. ಇಲ್ಲಿನ ಸಾಹಿತ್ಯ, ಸಂಗೀತ, ನೃತ್ಯಗಳು ವಚನಗಳು ಸಾಂಸ್ಕೃತಿಕವಾಗಿ ಶ್ರೇಷ್ಠವಾಗಿವೆ. ನೃತ್ಯಕಲೆ ಉಳಿದೆಲ್ಲಾ ಕಲೆಗಳಿಗಿಂತ ಸಭಿಕರನ್ನು ಹೆಚ್ಚು ಆಕರ್ಷಿಸುವ ಕಲೆಯಾಗಿದೆ ಎಂದು ಹೇಳಿದರು.

ಬೀದರ್‌ನಲ್ಲೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಹೆಚ್ಚಿಸಿ ಇಲ್ಲಿನ ಕಲಾಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಶಾಸ್ತ್ರೀಯ ನೃತ್ಯ ಶಾಲೆ ಆರಂಭಿಸಿ ಇಲ್ಲಿಯ ವಿದ್ಯಾರ್ಥಿಗಳ ತಂಡ ಕಟ್ಟಿ ಅವರಿಗೆ ವಿದೇಶಗಳಲ್ಲೂ ಪ್ರದರ್ಶನ ನೀಡುವ ಮಟ್ಟಿಗೆ ತಯಾರು ಮಾಡಿದ ನೂಪುರ ನೃತ್ಯ ಅಕಾಡೆಮಿಯ ಸಾಧನೆ ಅನನ್ಯವಾದುದು ಎಂದರು.

ಭಾರತೀಯ ಸಂಗೀತ ಕ್ಷೇತ್ರದಲ್ಲಿ ಗುರುಶಿಷ್ಯ ಪರಂಪರೆ ಘನಿಷ್ಠವಾದುದಾಗಿದೆ. ಇಲ್ಲಿನ ಸಂಬಂಧಗಳು ಜಾತಿ, ಮತ, ಪಂಥ, ಧರ್ಮಗಳನ್ನೂ ಮೀರಿದ್ದಾಗಿವೆ. ನೂಪುರ ನೃತ್ಯ ಅಕಾಡೆಮಿ ನಿರ್ದೇಶಕಿ ಉಷಾ ಪ್ರಭಾಕರ್ ಅವರಲ್ಲಿ ಅಪಾರ ಕಲಾ ಪ್ರತಿಭೆಯಿದೆ ಇದೆ ಎಂದರು.

ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡಿ, ಬೀದರ ಜಿಲ್ಲೆಗೆ ಉಷಾ ಪ್ರಭಾಕರ ಅವರ ಕೊಡುಗೆ ಅಪಾರವಾದುದಾಗಿದೆ. ಅವರ ಪತಿ ಪ್ರಭಾಕರ್ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತದ್ದೂ ಮಾದರಿಯಾಗಿದೆ ಎಂದರು.

ಬೀದರ್‌ನಲ್ಲಿ ನೃತ್ಯಾಲಯ ಆರಂಭಿಸಿ ಇದಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದಾರೆ. ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರ ಶ್ರೀಮಂತಗೊಳಿಸಿದ್ದುದು ಶ್ಲಾಘನೀಯವಾದದ್ದಾಗಿದೆ. ನೃತ್ಯದಲ್ಲಿ ಬೀದರಿನ ಕೀರ್ತಿ ದಶದಿಕ್ಕುಗಳಿಗೂ ಪಸರಿಸಿದ್ದುದು ಸಂತಸದಾಯಕವಾಗಿದೆ ಎಂದರು.

ನೂಪುರ ನೃತ್ಯ ಅಕಾಡೆಮಿಯ 25 ವರ್ಷಗಳ ಚೈತ್ರಯಾತ್ರೆಯ ವಿವರಗಳನ್ನು ಸಭೆಗೆ ಪರಿಚಯಿಸಲಾಯಿತು.

ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಿರ್ದೇಶಕಿಯಾದ ಡಾ ಗೀತಾ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಿ ಉಷಾ ಪ್ರಭಾಕರ ದಂಪತಿಯನ್ನು ಸನ್ಮಾನಿಸಿದರು.

ರೇಕುಳಗಿ ಶಂಭುಲಿಂಗೇಶ್ವರ ಕೇತ್ರದ ಡಾ ಮಂತ್ರ ಮಹರ್ಷಿ ಸದ್ಗುರೂಜಿ ಆಶೀರ್ವದಿಸಿದರು. ವಿವಿಧ ಕ್ಷೇತ್ರದ ಸಾಧಕರಾದ ಎಂ.ಜಿ.ದೇಶಪಾಂಡೆ, ರೂಪಾ ಪಾಟೀಲ, ರಾಜೇಂದ್ರಸಿಂಗ್ ಪವಾರ, ಸದಾನಂದ ಜೋಷಿ, ರೇಖಾ ಅಪ್ಪಾರಾವ್ ಸೌದಿ, ರಶ್ಮಿ ಶರ್ಮಾ ಅವರಿಗೆ ಅಕಾಡೆಮಿಯಿಂದ ಸನ್ಮಾನಿಸಲಾಯಿತು.

ಹರಟೆ ಕಟ್ಟೆ ವಿನೂತನ ಗೋಷ್ಠಿ ಮಂಗಲಾ ಭಾಗವತ ಸಾರಥ್ಯದಲ್ಲಿ ಜರುಗಿತು ಸುರೇಶ ಚೆನ್ನಶೆಟ್ಟಿ, ಶಿವಕುಮಾರ ಕಟ್ಟೆ, ಶಿವಲಿಂಗ ಹೇಡೆ, ಆರತಿ ಪಾಟೀಲ, ಶೀಲಾ.ಜೆ, ಸುಷ್ಮಾ ಪಾಟೀಲ, ಸುಬ್ರಹ್ಮಣ್ಯಪ್ರಭು ಭಾಗವಹಿಸಿ ತಮ್ಮ ವಿಷಯ ಮಂಡಿಸಿದರು.

ಸಿದ್ರಾಮಪ್ಪ ಮಾಸಿಮಾಡೆ. ಸಂಜೀವಕುಮಾರ ಅತಿವಾಳೆ, ವಿಜಯಕುಮಾರ ಸೋನಾರೆ, ಸಿದ್ರಾಮ ಸಿಂದೆ, ಡಾ.ಆರತಿ ರಘು, ಪೂಜಾ ಜಾರ್ಜ್, ವೀಣಾ ಶೆಣೈ, ಕಾಜಲ್ ಈಶ್ವರಸಿಂಗ್ ಠಾಕೂರ್, ಬಸವರಾಜ ರುದನೂರು, ಪ್ರಭಾಕರ, ರಘುರಾಮ ಉಪಾಧ್ಯ ಇದ್ದರು.