ನರ್ಸಿಂಗ್ ಕೋರ್ಸ್ ಸೇವಾ ಮನೋಭಾವದ ವೃತ್ತಿ

| Published : May 31 2024, 02:15 AM IST

ಸಾರಾಂಶ

ನರ್ಸಿಂಗ್ ಕೋರ್ಸ್ ಗೌರವಯುತವಾದ ಮಾನವೀಯತೆ ಸೇವೆ ಸಲ್ಲಿಸುವ ಒಂದು ಉತ್ತಮ ಕೋರ್ಸ್ ಆಗಿದ್ದು ಇಲ್ಲಿ ಶಿಸ್ತು ಸಹಾನುಭೂತಿ, ಬದ್ಧತೆ, ಧೈರ್ಯ ಬಹು ಮುಖ್ಯವಾದದ್ದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರಂ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನರ್ಸಿಂಗ್ ಕೋರ್ಸ್ ಗೌರವಯುತವಾದ ಮಾನವೀಯತೆ ಸೇವೆ ಸಲ್ಲಿಸುವ ಒಂದು ಉತ್ತಮ ಕೋರ್ಸ್ ಆಗಿದ್ದು ಇಲ್ಲಿ ಶಿಸ್ತು ಸಹಾನುಭೂತಿ, ಬದ್ಧತೆ, ಧೈರ್ಯ ಬಹು ಮುಖ್ಯವಾದದ್ದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರಂ ಹೇಳಿದರು.ನಗರದ ಜೆಎಸ್‌ಎಸ್ ಕಾಲೇಜ್ ಮತ್ತು ನರ್ಸಿಂಗ್ ಮತ್ತು ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಜ್ಯೋತಿ ಬೆಳಗಿಸುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂಗ್ಲೀಷ್ ಪದ ನರ್ಸಿಂಗ್, ಕನ್ನಡ ಪದ ಶುಶ್ರೂಷಣೆಯಲ್ಲೇ ಶಿಸ್ತು ಸಹಾನುಭೂತಿ, ಬದ್ಧತೆ, ಧೈರ್ಯ ಮಹತ್ವವನ್ನು ತಿಳಿಸುತ್ತದೆ. ಇದೊಂದು ಸೇವಾ ಮನೋಭಾವದ ವೃತ್ತಿ, ಇದಕ್ಕೆ ಪ್ರಪಂಚದಾದ್ಯಂತ ಉತ್ತಮ ಅವಕಾಶವಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಶುಶ್ರೂಷಕರು ಆರೋಗ್ಯ ಸೇವೆಗಳ ಬೆನ್ನೆಲುಬು, ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಜಾಗತಿಕ ಆರೋಗ್ಯ ಸವಾಲುಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನರ್ಸಿಂಗ್ ವೃತ್ತಿಗೆ ಗೌರವ ತಂದುಕೊಟ್ಟ ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ನಿಮ್ಮ ಜೀವನದಲ್ಲಿ ಸದಾ ಸ್ಮರಿಸಬೇಕು. ಅವರೇ ನಿಮಗೆ ಮಾದರಿ ಎಂದರು.

ರೋಗಿಯನ್ನು ಅರ್ಥಮಾಡಿಕೊಳ್ಳಬೇಕು, ನಿರಂತರವಾಗಿ ಗಮನಿಸಬೇಕು, ತಾತ್ಸಾರ ಮನೋಭಾವನೆಯನ್ನು ಇಟ್ಟುಕೊಳ್ಳದೇ ಸಿಂಪತಿ ತೋರಿ ನಗುಮುಖದಿಂದ ನೋಡಿಕೊಳ್ಳಬೇಕು ಎಂದರು. ನರ್ಸಿಂಗ್ ಕೇರ್ ಇಲ್ಲದೆ ಆಸ್ಪತ್ರೆ ನಡೆಸಲು ಸಾಧ್ಯವಿಲ್ಲ ನೀವು ತೆಗೆದುಕೊಂಡ ಪ್ರಮಾಣವು ರೋಗಿಗಳ ಆರೈಕೆಗಾಗಿ ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮಾನವೀಯ ಸೇವೆಗೆ ಶುಶ್ರೂಷೆ ಅತ್ಯಂತ ಪ್ರಮುಖ ವೃತ್ತಿ, ಆರೋಗ್ಯ ಕ್ಷೇತ್ರದಲ್ಲಿ ದಾದಿಯರು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಒಬ್ಬರ ನಡವಳಿಕೆ ಮತ್ತು ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್ ಮಾತನಾಡಿ, ದೀಪ ಬೆಳಗಿಸುವುದು ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವು ಫ್ಲಾರೆನ್ಸ್ ನೈಟಿಂಗೇಲ್ ಅವರಿಗೆ ಸಲ್ಲಿಸುವ ಗೌರವವಾಗಿದೆ. ನರ್ಸಿಗ್ ವೃತ್ತಿ ಆರಂಭಿಸುವವರಿಗೆ ಉತ್ತಮ ಅವಕಾಶಗಳಿವೆ, ಕೊವಿಡ್ ಸಂದರ್ಭದಲ್ಲಿ ಶುಶ್ರೂಷಕರು ತೋರಿದ ಕಾರ್ಯಕ್ಷಮತೆ ಅದರ ಗೌರವವನ್ನು ಹೆಚ್ಚಿಸಿತು ಎಂದರು.

ಈ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಜ್ಯೋತಿ ಬೆಳಗಿಸುವಿಕೆ ಮತ್ತು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಕಳೆದ ಸಾಲಿನಲ್ಲಿ ಉತ್ತಮ ಅಂಕ ಪಡೆದ ಮತ್ತು ಸೇವೆಯನ್ನು ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ವಿನಯ್‌ಕುಮಾರ್ ಪ್ರಾಸ್ತಾವಿಸಿದರು. ಉಪನ್ಯಾಸಕಿ ಉಷಾ ಕಾರ್ಯಕ್ರಮ ನಿರೂಪಿಸಿದರು.