ಸಾರಾಂಶ
ಗಿಡಕ್ಕೆ ನೀರೆರೆದು ಪರಿಸರ ದಿನ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಗಿಡಗಳನ್ನು ನೆಡುವುದಕ್ಕಿಂತ ಅವುಗಳನ್ನು ಪೋಷಿಸಿ, ಬೆಳಸುವುದು ಮುಖ್ಯವಾಗಿದೆ, ಗಿಡಗಳನ್ನು ನೆಟ್ಟು, ರಕ್ಷಿಸಿ, ಪೋಷಿಸುವ ಕೆಲವನ್ನು ಹೆಚ್ಚಿನ ಕಾಳಜಿ ಜತೆಗೆ ಕರ್ತವ್ಯವೆಂದು ತಿಳಿದು, ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಮಹಾಂತೇಶ್ ಮುಳವಳ್ಳಿಮಠ್ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಶುಶ್ರೂಷಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ವಲಯ ಅರಣ್ಯಾಧಿಕಾರಿಗಳ ಕಚೇರಿ ಆಯೋಜನೆ ಮಾಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಟ್ಟು ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮೊದಲ ಆದ್ಯತೆ ನೀಡಿ, ಪರಿಸರ ಉಳಿಸಿ, ಬೆಳಸೋಣ ಎಂದು ಹೇಳಿದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರವೀಣ್ ಆರ್.ಜೆ.ಎಸ್. ಮಾತನಾಡಿ, ‘ಪರಿಸರವು ಕಾಡಿನ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಮನಸ್ಥಿತಿಯಿಂದ ಹೊರ ಬರಬೇಕಿದೆ. ಪೃಥ್ವಿಯಲ್ಲಿ ಪರಿಸರ ನೈಸರ್ಗಿಕವಾಗಿ ನೀಡಿರುವ ಸಂಪನ್ಮೂಲಕ್ಕೆ ಮನುಷ್ಯ ಎಂಬ ಪ್ರಾಣಿಗೆ ಮಾತ್ರ ಹಕ್ಕಿದೆ ಎಂಬ ಮನೋಭಾವದಿಂದ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾಡಿನಲ್ಲಿ ಇತ್ತೀಚೆಗೆ ಸಾವನ್ನಪ್ಪುತ್ತಿರುವ ಪ್ರಾಣಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಕವರ್ ಕಂಡು ಬಂದಿದೆ. ಆದ್ದರಿಂದ ಮೊದಲಿಗೆ ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು. ಜತೆಗೆ ಸ್ವಚ್ಛ ಭಾರತ್ ಎಂಬ ಪರಿಕಲ್ಪನೆಯಲ್ಲಿ ಸುತ್ತಮುತ್ತಲಿನ ಪ್ರದೇಶ ಹಾಗೂ ಬಡಾವಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮುಖ್ಯವಾಗಿ ಮನೆಯ ತ್ಯಾಜ್ಯ ವಸ್ತುಗಳನ್ನು ಸಿಕ್ಕಸಿಕ್ಕ ಕಡೆ ಬಿಸಾಡಬಾರದು. ಪರಿಸರ ದಿನಚಾರಣೆ ಎಂದರೆ ನೈಸರ್ಗಿಕವಾದ ದೊರೆತಿರುವ ಸಂಪನ್ಮೂಲಗಳ ರಕ್ಷಣೆ, ಸ್ವಚ್ಛತೆಗೆ ಆದ್ಯತೆ ಮತ್ತು ಪರಿಸರ ದಿನಾಚರಣೆ ಎಂದು ಎರಡು ಗಿಡ ನೆಟ್ಟು ಸುಮ್ಮನಾದೇ ವರ್ಷ ಪೂರ್ತಿ ಗಿಡಮರಗಳ ಪೋಷಣೆ ಮಾಡುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶುಶ್ರೂಷಕ ಮಹಾವಿದ್ಯಾಲಯದ ಆಡಳಿತ ವರ್ಗ ಹಾಗೂ ಇತರ ಅಧಿಕಾರಿಗಳು ಇದ್ದರು.