ಸಾರಾಂಶ
ಇಂದಿನ ದಿನಗಳಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿಗಳಿಗೆ ಅನುಗುಣವಾಗಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ಉತ್ಪಾದನೆ ಮಾಡುವುದರೊಂದಿಗೆ ಜೊತೆಗೆ ಭವಿಷ್ಯತ್ತಿಗಾಗಿ ಶೇಖರಣೆಯೂ ಬಹುಮುಖ್ಯವಾಗಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ ದಳವಾಯಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಇಂದಿನ ದಿನಗಳಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿಗಳಿಗೆ ಅನುಗುಣವಾಗಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ಉತ್ಪಾದನೆ ಮಾಡುವುದರೊಂದಿಗೆ ಜೊತೆಗೆ ಭವಿಷ್ಯತ್ತಿಗಾಗಿ ಶೇಖರಣೆಯೂ ಬಹುಮುಖ್ಯವಾಗಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ ದಳವಾಯಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞಾನ ಸಂಸ್ಥೆ, ಮೈಸೂರು ಇವರ ಸಹಯೋಗದಲ್ಲಿ ‘ಭವಿಷ್ಯದ ಆಹಾರಗಳು’ಎಂಬ ವಿಷಯದ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಶನಿವಾರ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಈಗಿನ ಕಾಲದಲ್ಲಿ ಆಹಾರ ಪದ್ಧತಿಯಲ್ಲಿರುವ ಅಪೌಷ್ಟಿಕತೆ ಹಾಗೂ ರಾಸಾಯನ ಭರಿತ ಆಹಾರಗಳಿಂದಾಗಿ ಹಲವು ರೋಗಗಳು ಮಧ್ಯವಯಸ್ಸಿನಲ್ಲಿ ಬರುತ್ತಿವೆ. ಹೆಚ್ಚುತ್ತಿರುವ ಆಹಾರದ ಬೇಡಿಕೆಗಳನ್ನು ಪೂರೈಸಲು ಪರ್ಯಾಯ ಆಹಾರಗಳ ಮೂಲಗಳನ್ನು ಮತ್ತು ಸುಸ್ಥಿರ ತಂತ್ರಜ್ಞಾನವನ್ನು ಬಳಸಿಕೊಂಡು ಪೌಷ್ಟಿಕಾಂಶ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.ರೈತರಿಗೆ ಸಮತಟ್ಟಾದ ಪರಿಹಾರವನ್ನು ಸಂಬಂಧ ಪಟ್ಟ ಇಲಾಖೆಗಳು ನೀಡಬೇಕು. ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯು ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಹೇಳಿದರು. ತಂಜಾವೂರಿನ ಎನ್‌ಐಎಫ್‌ಟಿಇಎಂ ಸಂಸ್ಥೆಯ ನಿರ್ದೇಶಕ ಪ್ರೊ.ವಿ.ಪಳನಿಮುತ್ತು ಮಾತನಾಡಿ,
ಕಾಲಕ್ರಮೇಣ ಆಹಾರ ಪದ್ಧತಿಯಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಇಂದಿನ ಯುವಜನತೆ ತಿನ್ನುವ ಜಂಕ್ ಆಹಾರಗಳನ್ನು ನಾವು ಸಿರಿಧಾನ್ಯಗಳಿಂದ ಪೌಷ್ಠಿಕರಿಸಿ ಮಾರ್ಪಾಡು ಮಾಡಿ ನೀಡಬೇಕು ಎಂದು ತಿಳಿಸಿದರು.ಸಮ್ಮೇಳನದಲ್ಲಿ ವಿಜ್ಞಾನಿಗಳಾದ ಡಾ.ಚೇತನ್ ಹಂಚಾಟ್ಟಿ ಅವರು ನವೀನ ಆಹಾರ ಉತ್ಪಾದನೆ ಮತ್ತು ಮೌಲ್ಯವರ್ಧನೆ, ಡಾ.ಡಿ.ವಿ.ಚಿದಾನಂದ, ಡಾ.ರಾಮಚಂದ್ರ ಸಿಟಿ ಡಾ.ದಯಾನಂದ ಕುಮಾರ, ಡಾ.ಸತ್ತೇನ್ ಯಾದವ್, ಡಾ. ಜಗನ್ನಾಥ ಜೆ. ಅವರು ವಿವಿಧ ವಿಷಯಗಳ ಕುರಿತು ಮಂಡನೆ ಮಾಡಿದರು.
ಆಡಳಿತ ಮಂಡಳಿಯ ಸದಸ್ಯರಾದ ಬಸನಗೌಡ ಬ್ಯಾಗವಾಟ್, ಮಲ್ಲಿಕಾರ್ಜುನ ಡಿ., ಮಲ್ಲೇಶ್ ಕೊಲುಮಿ, ಕುಲ ಸಚಿವ ಶರಣಬಸಪ್ಪ ಕೋಟೆಪ್ಪ ಗೋಳ್, ಆಡಳಿತ ಅಧಿಕಾರಿಗಳಾದ ಡಾ.ಜಾಗೃತಿ ದೇಶಮಾನ್ಯ, ಸಂಚಾಲಕರಾದ ಡಾ. ಮಲ್ಲಿಕಾರ್ಜುನ ಎಸ್ ಅಯ್ಯನಗೌಡ, ಉಪ ಸಂಘಟನಾ ಕಾರ್ಯದರ್ಶಿ ಡಾ.ಉದಯ್ ಕುಮಾರ್ ನಿಡೋಣಿ ಸೇರಿ ಅನೇಕರು ಇದ್ದರು.