ಓಬಳಶೆಟ್ಟಿಹಳ್ಳಿಯ ಶತಾಯುಷಿ ಸೂಲಗಿತ್ತಿ ಈರಮ್ಮಗೆ ಮುಡಿಗೆ ರಾಜ್ಯೋತ್ಸವ ಪ್ರಶಸ್ತಿ

| Published : Oct 31 2025, 02:30 AM IST

ಓಬಳಶೆಟ್ಟಿಹಳ್ಳಿಯ ಶತಾಯುಷಿ ಸೂಲಗಿತ್ತಿ ಈರಮ್ಮಗೆ ಮುಡಿಗೆ ರಾಜ್ಯೋತ್ಸವ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸೂಲಗಿತ್ತಿ ಈರಮ್ಮ ಅವರಿಂದ ಹೆರಿಗೆ ಮಾಡಿಸುವುದಕ್ಕಾಗಿ ಜನರು ಇಷ್ಟಪಡುತ್ತಿದ್ದರು. ಅಲ್ಲದೆ, ಹೆರಿಗೆ ನೋವು ಕಾಣಿಸಿಕೊಂಡಿದೆ...

ಕೂಡ್ಲಿಗಿ: ತನ್ನ ೩೦ನೇ ವಯಸ್ಸಿಗೆ ಆರಂಭಿಸಿ ಸುಮಾರು 6-7 ದಶಕಗಳ ಕಾಲ ೧೩ ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಶತಾಯುಷಿ ತಾಲೂಕಿನ ಓಬಳಶೆಟ್ಟಿಹಳ್ಳಿಯ ಸೂಲಗಿತ್ತಿ ಈರಮ್ಮ ಅವರ ಮುಡಿಗೆ ೨೦೨೫ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯ ಗರಿ ಮೂಡಿದೆ.

ಸೂಲಗಿತ್ತಿ ಈರಮ್ಮ ಅವರಿಗೀಗ ೧೦೩ ವರ್ಷ. ಆಸ್ಪತ್ರೆಗಳೇ ಇಲ್ಲದ ಕಾಲದಲ್ಲಿ ಹತ್ತಾರು ಹಳ್ಳಿಗಳಲ್ಲಿ ಯಾರೇ ಹೆರಿಗೆಯಾಗುವ ಸಂದರ್ಭದಲ್ಲಿ ಓಬಳಶೆಟ್ಟಿಹಳ್ಳಿಯ ಸೂಲಗಿತ್ತಿ ಈರಮ್ಮ ಅವರ ಹಾಜರಿ ಇರುತ್ತಿತ್ತು. ಸುಸೂತ್ರವಾಗಿ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಗುವಿನ ಜೀವ ಕಾಪಾಡುವ ದೇವರಂತೆ ಈರಮ್ಮ ಕಾಣುತ್ತಿದ್ದರು ಎಂಬುದನ್ನು ಈಗಲೂ ಹಿರಿಯರು ನೆನೆಯುತ್ತಾರೆ.

ಸೂಲಗಿತ್ತಿ ಈರಮ್ಮ ಅವರಿಂದ ಹೆರಿಗೆ ಮಾಡಿಸುವುದಕ್ಕಾಗಿ ಜನರು ಇಷ್ಟಪಡುತ್ತಿದ್ದರು. ಅಲ್ಲದೆ, ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಯಾರೇ ರಾತ್ರಿ ಎಷ್ಟೇ ಹೊತ್ತಿನಲ್ಲೂ ಕರೆದರೂ ಎಂದೂ ಬೇಜಾರು ಮಾಡಿಕೊಳ್ಳುತ್ತಿರಲ್ಲಿ. ಅಲ್ಲದೆ, ಯಾವುದೇ ಫಲಾಪೇಕ್ಷೆ ಇಲ್ಲದೇ ಸೂಲಗಿತ್ತಿ ಕಾಯಕವನ್ನು ಸೇವೆಯೆಂದೇ ಭಾವಿಸಿದ್ದರು. ಸೂಲಗಿತ್ತಿ ಈರಮ್ಮ ಅವರನ್ನು ಸರ್ಕಾರ ಗುರುತಿಸುವ ಮೂಲಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿಯ ಸಂಗತಿ ಎನ್ನುತ್ತಾರೆ ರೈತ ಮುಖಂಡ ಜಿ.ಪಿ. ಗುರುಲಿಂಗಪ್ಪ, ಟಿ.ಕಲ್ಲಹಳ್ಳಿ ಗೊಲ್ಲರಹಟ್ಟಿಯ ತಿಪ್ಪೇಸ್ವಾಮಿ ಮತ್ತಿತರರು.

ಹಿರಿಯ ಜೀವ ಈರಮ್ಮಜ್ಜಿಯ ಸೇವೆಯನ್ನು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಗುರುತಿಸಿ ಕಳೆದ ವರ್ಷ ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದರು. ಈಗ, ರಾಜ್ಯ ಸರ್ಕಾರವು ನಮ್ಮ ಅಮ್ಮನ ಸಮಾಜ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂಬ ಸುದ್ದಿ ತಿಳಿದು ನಮ್ಮ ಕುಟುಂಬಕ್ಕೆ ಅತೀವ ಸಂತೋಷವಾಗಿದೆ ಎನ್ನುವುದು ಈರಮ್ಮ ಅವರ ಪುತ್ರ ಬಸಪ್ಪ ಅವರ ಮಾತು.

ಈರಮ್ಮ ಇದ್ರೆ ನೆಮ್ಮದಿ:

ತಾಲೂಕಿನ ಓಬಳಶೆಟ್ಟಿಹಳ್ಳಿ, ಹೊಸಹಟ್ಟಿ, ಮ್ಯಾಸರಹಟ್ಟಿ ಸೇರಿ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಯಾರದೇ ಮನೆಯಲ್ಲಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂಬ ಸುದ್ದಿ ತಿಳಿದರೆ ಸಾಕು ಅಲ್ಲಿಗೆ ತೆರಳುವಂಥ ತಾಯಿ ಹೃದಯ ಗೊಲ್ಲರ ಸೂಲಗಿತ್ತಿ ಈರಮ್ಮ ಅವರದು. ಸೂಲಗಿತ್ತಿ ಈರಮ್ಮ ಇದ್ರೆ ತಾಯಿ, ಮಗುವಿನ ಜೀವಕ್ಕೆ ಅಪಾಯವೇ ಇರಲ್ಲ ಎಂಬ ನೆಮ್ಮದಿ ಮಾತ್ರ ಅನೇಕ ಪಾಲಕರಲ್ಲಿತ್ತು.ನನಗೆ ಪ್ರಶಸ್ತಿ ಬಂದಿದ್ದು ಗೊತ್ತಿರಲಿಲ್ಲ. ನಮ್ಮೂರಿನ ಹುಡುಗರು ಹೇಳಿದಾಗ ತಿಳಿಯಿತು. ನನ್ನ 103ನೇ ವಯಸ್ಸಲ್ಲಿ ಪ್ರಶಸ್ತಿ ಬಂದಿರುವುದು ಖುಷಿಯ ವಿಚಾರ ಎನ್ನುತ್ತಾರೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಓಬಳಶೆಟ್ಟಿಹಳ್ಳಿಯ ಸೂಲಗಿತ್ತಿ ಈರಮ್ಮ.ಕೂಡ್ಲಿಗಿ ತಾಲೂಕಿನ ಕುಗ್ರಾಮವಾದ ಓಬಳಶೆಟ್ಟಿಹಳ್ಳಿಯ ಸೂಲಗಿತ್ತಿ ಗೊಲ್ಲರ ಈರಮ್ಮ ಅವರು ಹತ್ತಾರು ಹಳ್ಳಿಗಳಲ್ಲಿ ೧೩ ಸಾವಿರಕ್ಕೂ ಹೆಚ್ಚು ಸುಸೂತ್ರವಾಗಿ ಹೆರಿಗೆ ಮಾಡಿಸುವಂಥ ಸೇವೆ ಸಲ್ಲಿಸಿರುವುದನ್ನು ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಸಚಿವರು, ಆಯ್ಕೆ ಸಮಿತಿಗೆ ಧನ್ಯವಾದ ತಿಳಿಸುತ್ತೇನೆ ಎನ್ನುತ್ತಾರೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್.