ಸಾರಾಂಶ
ವಿವೇಕ್ ಪೋಷಕರ ಕಾರ್ಯಾಗಾರ । ವಯಸ್ಕರ ಸ್ಥೂಲಕಾಯ ಕುರಿತು ಉಪನ್ಯಾಸ
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ: ಸ್ಥೂಲಕಾಯತೆ ಅಥವಾ ಬೊಜ್ಜು ಎಂದರೆ ಶರೀರದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಕೊಬ್ಬಿನ ಪ್ರಮಾಣ ಸಂಗ್ರಹವಾಗಿರುವಂತಹ ಸ್ಥಿತಿ. ಇದು ಒಂದು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದ್ದು ಪ್ರಪಂಚದಾದ್ಯಂತ ಕೋಟ್ಯಾಂತರ ಜನರ ಮೇಲೆ ಪರಿಣಾಮವನ್ನು ಬೀರುತ್ತಿದೆ ಎಂದು ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಕನ್ಸಲ್ಟೆಂಟ್ ಎಂಡೋಕ್ರಿನೋಲಜಿಸ್ಟ್ ಡಾ.ವಿ.ಜೆ.ಮಲ್ಲಿಕಾರ್ಜುನ್ ತಿಳಿಸಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯ ಸಭಾಂಗಣದಲ್ಲಿ ವಿವೇಕ್ ಪೋಷಕರ ಕಾರ್ಯಾಗಾರದಡಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ‘ವಯಸ್ಕರಲ್ಲಿ ಕಾಡುವ ಸ್ಥೂಲತೆ, ಅಲಕ್ಷಿಸಿದರೆ ಮಾರಣಾಂತಿಕವಾಗಬಹುದು ಎಚ್ಚರವಿರಲಿ’ ವಿಷಯ ಕುರಿತು ಮಾತನಾಡಿದರು.ಈ ಖಾಯಿಲೆಯನ್ನು ದೇಹದ ತೂಕ ಹೆಚ್ಚಳ ಎಂದು ನೋಡದೆ ಮುಂದೆ ಬರುವ ಅನೇಕ ಖಾಯಿಲೆಗಳ ಮುನ್ನುಡಿ ಎಂದು ತಿಳಿಯಬೇಕಾಗುತ್ತದೆ. ಸಾಮಾನ್ಯವಾಗಿ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಸೇವಿಸಿದಾಗ ಬೊಜ್ಜುತನ ಉಂಟಾಗುತ್ತದೆ ಎಂದರು.
ಬೊಜ್ಜಿಗೆ ಮುಖ್ಯ ಕಾರಣಗಳು ಅಹಿತಕರ ಆಹಾರ ಪದ್ಧತಿಯಾಗಿದೆ. ಕೊಬ್ಬಿನಾಂಶ ಜಾಸ್ತಿ ಇರುವ/ ಸಂಸ್ಕರಿಸಿದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹಾಗೂ ಕಡಿಮೆ ಹಣ್ಣು/ತರಕಾರಿಗಳನ್ನು ಸೇವಿಸುವುದರಿಂದ ಬರುತ್ತದೆ. ನಿತ್ಯ ವ್ಯಾಯಾಮದ ಕೊರತೆ, ನಡಿಗೆ, ಯೋಗ ಹಾಗು ಇತರ ಚಟುವಟಿಕೆಗಳು ಇಲ್ಲದಿರುವುದು ಬೊಜ್ಜಿಗೆ ಕಾರಣವಾಗುತ್ತದೆ ಎಂದು ಹೇಳಿದರು.ಕೆಲವು ಸಂಧರ್ಭಗಳಲ್ಲಿ ಅನುವಂಶೀಯತೆಯ ಕಾರಣದಿಂದ ಸ್ಥೂಲಕಾಯತೆಯ ತೊಂದರೆ ಕಾಣಬಹುದು. ವೈದ್ಯಕೀಯ ಕಾರಣಗಳಿಂದ ಈ ಸ್ಥಿತಿಯು ಕಾಣಬಹುದು. ಥೈರಾಯ್ಡ ಸಮಸ್ಯೆಗಳು, ಕುಶಿಂಗ್ಸ ಸಿಂಡ್ರೋಮ್ ಇತ್ಯಾದಿ ಕಾಣಿಸಬಹುದು. ಕೆಲವೊಮ್ಮೆ ಡಿಪ್ರೆಶನ್, ತೀವ್ರ ಒತ್ತಡ ಹೆಚ್ಚಾದಾಗ ಆಹಾರದ ಸೇವನೆ ಹೆಚ್ಚಾಗಬಹುದು ಎಂದು ಎಚ್ಚರಿಸಿದರು.
ಸ್ಥೂಲಕಾಯದಿಂದ ಗಂಭೀರವಾದ ಆರೋಗ್ಯದ ತೊಂದರೆಗಳು ಉಂಟಾಗುತ್ತವೆ. ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳಾದ ಹೃದಯಘಾತ, ಅಧಿಕ ರಕ್ತದೊತ್ತಡ, ಅತಿಯಾದ ಕೊಲೆಸ್ಟ್ರಾಲ್ ಮುಂತಾದವುಗಳಿಂದ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಬಹುದು. ಹೆಚ್ಚಾಗಿ ಸ್ಥೂಲಕಾಯತೆ ಇದ್ದವರಲ್ಲಿ ಸಂಧಿವಾತ ಸಮಸ್ಯೆ ಎದುರಾಗಲಿದ್ದು, ಅತಿಯಾದ ತೂಕದಿಂದ ಕಾಲಿನ ಮೇಲೆ/ಬೆನ್ನಿನ ಮೇಲೆ ಒತ್ತಡ ಹೆಚ್ಚಾಗಿ ಮೋಣಕಾಲು, ಬೆನ್ನು ನೋವು ಬರಲು ಕಾರಣವಾಗುತ್ತದೆ. ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದರು.ಕಡಿಮೆ ಕ್ಯಾಲೋರಿಯಿರುವ ಆಹಾರ ಪದಾರ್ಥಗಳನ್ನು ಸೇವಿಸುವುದು, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವುದು,ಕಡಿಮೆ ಸಕ್ಕರೆಯಂಶ ಹಾಗೂ ಅಧಿಕ ಪ್ರೋಟಿನಗಳನ್ನು ಸೇವಿಸುದು, ಪ್ರತಿನಿತ್ಯ 30 ನಿಮಿಷ ನಡೆಯವುದು, ಓಡುವುದು, ಈಜುವುದು ಅಥವ ಇತರೆ ದೈಹಿಕ ವ್ಯಾಯಾಮಗಳನ್ನು ಮಾಡಬೇಕು. ದಿನಕ್ಕೆ 6-8 ಗಂಟೆಗಳಷ್ಟು ನಿದ್ರೆ ಮಾಡಬೇಕು. ಜೀವನ ಶೈಲಿ ಬದಾಲಾವಣೆ ಮಾಡಿಕೊಳ್ಳಬೇಕು. ಧೂಮಪಾನ, ಮಧ್ಯಪಾನವನ್ನು ಬಿಡುವುದು ಉತ್ತಮ ಎಂದರು.
ವೈದ್ಯಕೀಯ ಕಾರಣಗಳಿಂದ ಸ್ಥೂಲಕಾಯ ಬಂದಿದ್ದರೆ, ಅದನ್ನು ಸರಿಯಾಗಿ ನಿರ್ವಹಿಸುವುದರಿಂದ ಸ್ಥೂಲಕಾಯವನ್ನು ಕಡಿಮೆ ಮಾಡಬಹುದು. ಹಾಗು ಇತ್ತಿಚೆಗೆ ಸ್ಥೂಲಕಾಯವನ್ನು ನಿಯಂತ್ರಿಸಲು ಕೆಲವು ಔಷಧಗಳು ಲಭ್ಯವಿದ್ದು, ಇವನ್ನು ಕೊನೆಯ ಆಯ್ಕೆಯಾಗಿ ಉಪಯೋಗಿಸಬೇಕು. ಮುಖ್ಯವಾಗಿ ಆರೋಗ್ಯಕರ ಜೀವನಶೈಲಿಯಿಂದ ಹಾಗೂ ಅಗತ್ಯವಿರುವ ವೈದ್ಯಕೀಯ ನೆರವನ್ನು ಪಡೆಯುವ ಮೂಲಕ ನಿಯಂತ್ರಿಸಬಹುದು ಎಂದು ಹೇಳಿದರು.ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ.ಗುರುಪ್ರಸಾದ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ.ಮೃತ್ಯುಂಜಯ, ಡಾ.ರೇವಪ್ಪ, ಮಕ್ಕಳ ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಇತರರು ಭಾಗವಹಿಸಿದ್ದರು.