ಸಾರಾಂಶ
ರೋಣ: ಬ್ರಿಟಿಷರ್ ಕಾಲದ ಕಾಯ್ದೆಗಳನ್ನು ನಾವು ಇಂದಿಗೂ ಪಾಲಿಸಿಕೊಂಡು ಬರುವದ್ದಲ್ಲದೇ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿರುವುದು ಅಕ್ಷಮ್ಯ ಅಪರಾಧವಾಗಲಿದೆ. ಸಮಾಜ ಪರಿವರ್ತನೆಗೆ ಹೊಸದಾಗಿ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆ ಅತಿ ಮುಖ್ಯವಾಗಿದ್ದು, ಇದು ದಂಡನೆಯಲ್ಲ, ನ್ಯಾಯ ಸಮ್ಮತವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಗದಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.ಅವರು ಶನಿವಾರ ಸಂಜೆ ಪಟ್ಟಣದ ರಾಘವೇಂದ್ರರಾವ್ ಕುಲಕರ್ಣಿ ಮಂಗಲ ಭವನದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರ, ನ್ಯಾಯವಾದಿಗಳ ಸಂಘ ರೋಣ ಸಹಯೋಗದಲ್ಲಿ ತಾಲೂಕು ಮಟ್ಟದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬ್ರಿಟಿಷರು ಕೊಟ್ಟ ಕಾನೂನು ಇಂದಿಗೂ ಇದ್ದು, ಯಾರೋ ಕೊಟ್ಟ ಕಾನೂನನ್ನು ನಾವು ಇಂದಿಗೂ ಪಾಲಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಬ್ರಿಟಿಷರು ತಮ್ಮ ರಕ್ಷಣೆಗಾಗಿ, ತಮ್ಮ ಆಡಳಿತ ಸರಳವಾಗಿ ನಡೆಯಲಿ, ತಮ್ಮ ವ್ಯಾಪಾರ ವೃದ್ಧಿಗಾಗಿ ಭಾರತದ ಮೇಲೆ ತಾವು ರಚಿಸಿದ ಕಾನೂನನ್ನು ಹೇರಿದರು. ಬ್ರಿಟಿಷರು ಅಂದು ಜಾರಿಗೆ ತಂದಿದ್ದ ವಸಹಾತುಶಾಹಿ ಕಾನೂನನ್ನೆ ನಾವು ಇಂದಿಗೂ ಪಾಲಿಸಬೇಕಾ ಎಂಬುದು ಪ್ರಶ್ನೆಯಾಗಿದೆ. ಇಂಡಿಯನ್ ಪಿನಲ್ ಕೋಡ್ ಬದಲಿಗೆ ಭಾರತೀಯ ನ್ಯಾಯ ಸಂಹಿತೆಗೆ ಪ್ರಾಮುಖ್ಯ ನೀಡುವದು ಅಗತ್ಯವಿದೆ. ತಪ್ಪು ಮಾಡಿದವರನ್ನು ದಂಡಿಸದೇ, ಮನ ಪರಿವರ್ತನೆಗೆ ನಾವು ಶ್ರಮಿಸಬೇಕಿದೆ. ಇಂಡಿಯನ್ ಪಿನಲ್ ಕೋಡಗಿಂತ ಭಾರತೀಯ ನ್ಯಾಯ ಸಂಹಿತೆಯಲ್ಲಿ ನ್ಯಾಯವಿದೆ, ಇದರಿಂದ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು.ಹಳೆ ಸಂಹಿತೆಯಿಂದ ಹೊಸ ಸಂಹಿತೆಗೆ ಹೋಗಬೇಕಾದಲ್ಲಿ ಕೆಲ ಸಣ್ಣ ಪುಟ್ಟ ತೊಂದರೆ ಬರುತ್ತವೆ. ಅದನ್ನೆ ದೊಡ್ಡದು ಮಾಡದೇ, ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯನ್ನು ಎಲ್ಲರೂ ಸ್ವೀಕರಿಬೇಕು. ಈ ದಿಶೆಯಲ್ಲಿ ರೋಣ ವಕೀಲ ಸಂಘ ಹಮ್ಮಿಕೊಂಡ ಕಾರ್ಯಾಗಾರ ಔಚಿತ್ಯ ಪೂರ್ಣವಾಗಿದೆ. ಪ್ರತಿಯೊರ್ವ ವಕೀಲರು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಕಾಯಿದೆಗಳ ಕುರಿತು ಅರಿತುಕೊಳ್ಳಬೇಕು ಎಂದರು. ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಬಸವರಾಜ ಮಾತನಾಡಿದರು.
ಅಧ್ಯಕ್ಷತೆಯನ್ನು ರೋಣ ವಕೀಲ ಸಂಘದ ಅಧ್ಯಕ್ಷ ವ್ಹಿ.ಎಸ್.ಬಂಗಾರಿ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ, ರೋಣ ಹಿರಿಯ ದಿವಾಣಿ ನ್ಯಾಯಾಧೀಶ ಚಿನ್ನಸ್ವಾಮಿ. ಎಸ್,. ನ್ಯಾಯಾಧೀಶ ಭರತ ಕರಗುದರಿ, ಹೆಚ್ಚುವರಿ ನ್ಯಾಯಾಧೀಶ ಆದಿತ್ಯಾ .ಆರ್. ಕಲಾಲ, ಹಿರಿಯ ವಕೀಲ ವಿ..ಆರ್. ಗುಡಿಸಾಗರ, ಕರ್ನಾಟಕ ರಾಜ್ಯ ವಕೀಲ ಪರಿಷತ್ ಸದಸ್ಯರಾದ ಎ.ಎ. ಮಗದುಮ್, ಎಸ್.ಎಸ್. ಮಿಟ್ಟಲಕೋಡ, ಕೊಟೇಶ್ವರರಾವ್, ಐ.ಎಂ. ಫಾರೂಕಿ ಮುಂತಾದವರು ಉಪಸ್ಥಿತರಿದ್ದರು.
ವಕೀಲ ಎಂ.ಎಸ್. ಹಡಪದ ಸ್ವಾಗತಿಸಿದರು. ವಕೀಲ ಎಸ್.ಎನ್. ತಿಮ್ಮನಗೌಡ್ರ ನಿರೂಪಿಸಿದರು.