ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿಯ ಆಸರ ಓಣಿಯಲ್ಲಿ ಈ ಹಿಂದೆ ಇತ್ತು ಎನ್ನಲಾದ ಪುಷ್ಕರಣಿ ಜಾಗದಲ್ಲಿ ರಸ್ತೆ ಕಾಮಗಾರಿ ವಿರೋಧಿಸಿ ಶ್ರೀರಾಮಸೇನೆ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು. ಈ ನಡುವೆ ರಸ್ತೆ ಬೇಕು ಎಂದು ಮತ್ತೊಂದು ಗುಂಪು ಒತ್ತಾಯ ಮಾಡಿತು. ಈ ಹಿನ್ನೆಲೆಯಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪೊಲೀಸರು, ಪಾಲಿಕೆ ಅಧಿಕಾರಿ ವರ್ಗ ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.ಆಗಿದ್ದೇನು?: ಆಸರ ಓಣಿಯಲ್ಲಿ ದೇವಸ್ಥಾನವೂ ಇದೆ; ಮಸೀದಿಯೂ ಇದೆ. ಇಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ರಸ್ತೆಯನ್ನು ಪುಷ್ಕರಣಿ ಇರುವ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ಆದಕಾರಣ ದಾಖಲೆಗಳನ್ನು ಪರಿಶೀಲಿಸಬೇಕೆಂಬುದು ಹಿಂದೂಪರ ಸಂಘಟನೆಗಳ ವಾದ. ಅಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಶ್ರೀ ಸಿದ್ಧಾರೂಢ ಮಠದ ದ್ವಾರ ಬಾಗಿಲು ಬಳಿ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು, ರಸ್ತೆ ಕಾಮಗಾರಿ ನಡೆಸುತ್ತಿರುವ ಪಾಲಿಕೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಪುಷ್ಕರಣಿ ಇತ್ತು ಎನ್ನುವ ಜಾಗದಲ್ಲಿ ರಸ್ತೆ ಕಾಮಗಾರಿ ನಡೆಸಬಾರದು ಎಂದು ಕಿಡಿಕಾರಿದರು.
ವಾರ್ಡ್ ನಂ. 55ರ ವ್ಯಾಪ್ತಿಯ ಆಸರ ಓಣಿಯಲ್ಲಿ ಭವಾನಿ ಶಂಕರ ದೇವಸ್ಥಾನದ ಬಳಿ ಈ ಹಿಂದೆ ಪುಷ್ಕರಣಿ ಇತ್ತು. ಆದರೀಗ ಅದು ಸಂಪೂರ್ಣವಾಗಿ ಮುಚ್ಚಿದೆ. ಈ ಬಗ್ಗೆ ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡದೇ, ಅಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಆ ಮೂಲಕ ಹಿಂದೂ ದೇವಾಲಯದ ಪುರಾತನ ಪುಷ್ಕರಣಿಯೇ ಇಲ್ಲದಂತೆ ಮಾಡಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಆಗುತ್ತಿದೆ ಎಂದು ಹಿಂದೂಪರ ಸಂಘಟನೆಯ ಶ್ರೀಧರ ಕಲಬುರಗಿ ಆರೋಪಿಸಿದರು.ಈ ಕೂಡಲೇ ರಸ್ತೆ ಕಾಮಗಾರಿ ಸ್ಥಗಿತಗೊಳಿಸಬೇಕು ಮತ್ತು ಪುರಾತತ್ವ ಇಲಾಖೆಯಿಂದ ಪುಷ್ಕರಣಿ ಉತ್ಖನನ ಕಾರ್ಯ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪಾಲಿಕೆ ಅಧಿಕಾರಿಗಳು ಎಂಟ್ರಿ: ಪ್ರತಿಭಟನಾ ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಆಗಮಿಸಿ ಈ ಬಗ್ಗೆ ಪ್ರತಿಭಟನಾಕಾರರ ಜತೆ ಚರ್ಚಿಸಲು ಸಿದ್ದ ಎಂದು ಹೇಳಿದರು. ಇದರಿಂದ ಅಲ್ಲಿನ ಪ್ರತಿಭಟನೆ ಹಿಂಪಡೆದ ಸಂಘಟನೆಯ ಕಾರ್ಯಕರ್ತರು ಪಾಲಿಕೆ ಆವರಣಕ್ಕೆ ಬಂದರು. ಇಲ್ಲಿಯೂ ಕೂಡ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ರಸ್ತೆ ಬೇಕು ಎಂಬ ಒತ್ತಾಯ: ಈ ನಡುವೆ ಅತ್ತ ಹಿಂದೂಪರ ಸಂಘಟನೆಗಳು ರಸ್ತೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಅರಿತ ಸ್ಥಳೀಯ ನಿವಾಸಿಗಳು, ತಮಗೆ ಓಡಾಡಲು ರಸ್ತೆ ಬೇಕು ಎಂಬ ಒತ್ತಾಯವನ್ನು ಮಾಡಿದ್ದಾರೆ. ರಸ್ತೆ ನಿರ್ಮಾಣದಿಂದ ಜನತಾ ಕಾಲನಿ, ಪೌರಕಾರ್ಮಿಕರ ನಿವಾಸಗಳಿಗೆ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿತ್ತು ಎಂದು ಪಾಲಿಕೆ ಸದಸ್ಯ ಇಕ್ಬಾಲ್ ನವಲೂರು ತಿಳಿಸಿದ್ದಾರೆ.
ಸಭೆ: ಸ್ಥಳೀಯ ದೇವಸ್ಥಾನ ಕಮಿಟಿ, ಮಸೀದಿ ಕಮಿಟಿ, ಹಿಂದೂಪರ ಸಂಘಟನೆ, ವಿವಿಧ ದಲಿತ ಸಂಘಟನೆ ಮತ್ತು ಸ್ಥಳೀಯ ಮುಖಂಡರೊಂದಿಗೆ ಮೇಯರ್ ದುರ್ಗಮ್ಮ ಬಿಜವಾಡ, ಆಯುಕ್ತ ರುದ್ರೇಶ ಘಾಳಿ ಸಭೆ ನಡೆಸಿದರು.ಸಭೆಯಲ್ಲಿ ಈ ಬಗ್ಗೆ ದಾಖಲೆ ಪರಿಶೀಲಿಸಲು ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಬುಧವಾರದ ವರೆಗೆ ಗಡವು ನೀಡಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಹಿಂಪಡೆದರು. ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ವಶಕ್ಕೆ-ಬಿಡುಗಡೆ: ಈ ನಡುವೆ ಇತ್ತ ಸಭೆ ನಡೆಯುತ್ತಿದ್ದ ವೇಳೆಯೇ ಅತ್ತ ಹಿಂದೂಪರ ಸಂಘಟನೆಯ ಕೆಲ ಕಾರ್ಯಕರ್ತರು, ಪುನಃ ಆಸರ ಓಣಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾದರು. ಆಗ 20ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಜಯತೀರ್ಥ ಕಟ್ಟಿ, ಸುಧಾಕರ ಶೆಟ್ಟಿ, ಬಸವರಾಜ ಗೌಡರ, ಅಮಿತ ಬದ್ದಿ, ಗಣೇಶ ಲದ್ವಾ, ಅಣ್ಣಪ್ಪ ದಿವಟಗಿ, ರಘು ಯಲ್ಲಕ್ಕನವರ, ಮಂಜು ಕಾಟಕರ, ಸಂತೋಷ ಕಾಂಬಳೆ ಇದ್ದರು. ಸಭೆಯಲ್ಲಿ ಪಾಲಿಕೆ ಸದಸ್ಯ ಇಕ್ಬಾಲ್ ನವಲೂರ, ಬಷೀರ ಗುಡಮಾಲ್ ಇತರರು ಕೂಡ ಪಾಲ್ಗೊಂಡಿದ್ದರು.
ದಾಖಲೆ ಪರಿಶೀಲನೆ: ಪಾಲಿಕೆಯಲ್ಲಿರುವ ದಾಖಲಾತಿಗಳನ್ವಯ ಅದು ಪಾಲಿಕೆ ಜಾಗ ಎಂದು ನಮೂದು ಇದೆ. ಯುಜಿಡಿ, ವಾಟರ್ ಲೈನ್ ಕೂಡ ಇದೆ. ಆದರೀಗ ಸಂಘಟನೆಗಳ ಮನವಿ ಸ್ವೀಕರಿಸಿ, ಪುರಾತತ್ವ ಇಲಾಖೆಯಲ್ಲಿ ದಾಖಲೆ ಪರಿಶೀಲನೆಗೆ ಪತ್ರ ಬರೆಯಲಾಗುತ್ತಿದೆ. ಪುರಾತತ್ವ ಇಲಾಖೆಯ ದಾಖಲೆಗಳನ್ನು ಪಡೆದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಹೇಳಿದರು.ಆಸರ ಓಣಿಯಲ್ಲಿ ಪಾಲಿಕೆಯಿಂದ ನಡೆಯುತ್ತಿರುವ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ನಿಟ್ಟಿನಲ್ಲಿ ಸಂಘಟನೆಯ ಪದಾಧಿಕಾರಿಗಳ ಜತೆಗೆ ಸಭೆ ನಡೆಸಿದ ನಂತರವೂ ಪ್ರತಿಭಟನೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಹೇಳಿದರು.