ಆಕ್ಷೇಪಣೆಗೆ ಪುರಸಭೆಯಿಂದ ಪ್ರಮಾಣಪತ್ರ ಅಗತ್ಯವಿಲ್ಲ: ಸತೀಶ್ ಕುಮಾರ್

| Published : Aug 22 2024, 12:55 AM IST

ಸಾರಾಂಶ

ಪಾಂಡವಪುರ ಪಟ್ಟಣದ ನಿವೇಶನಗಳ ಖರೀದಿ, ಮಾರಾಟ ಹಾಗೂ ಇತರೆ ಯಾವುದೇ ಪರಭಾರೆ ವಿಚಾರಗಳಿಗೆ ಸಂಬಂಧಿಸಿದಂತೆ ಸಬ್ ರಿಜಿಸ್ಟರ್‌ನಲ್ಲಿ ನೋಂದಣಿ ಮಾಡಿಸಲು ಪುರಸಭೆಯಿಂದ ಯಾವುದೇ ಆಕ್ಷೇಪಣೆ ಪ್ರಮಾಣಪತ್ರ (ನೋ ಅಬ್‌ಜೆಕ್ಷನ್ ಸರ್ಟಿಫಿಕೇಟ್) ಪಡೆಯುವ ಅಗತ್ಯವಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ನಿವೇಶನಗಳ ಖರೀದಿ, ಮಾರಾಟ ಹಾಗೂ ಇತರೆ ಯಾವುದೇ ಪರಭಾರೆ ವಿಚಾರಗಳಿಗೆ ಸಂಬಂಧಿಸಿದಂತೆ ಸಬ್ ರಿಜಿಸ್ಟರ್‌ನಲ್ಲಿ ನೋಂದಣಿ ಮಾಡಿಸಲು ಪುರಸಭೆಯಿಂದ ಯಾವುದೇ ಆಕ್ಷೇಪಣೆ ಪ್ರಮಾಣಪತ್ರ (ನೋ ಅಬ್‌ಜೆಕ್ಷನ್ ಸರ್ಟಿಫಿಕೇಟ್) ಪಡೆಯುವ ಅಗತ್ಯವಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್‌ ಕುಮಾರ್ ಸ್ಪಷ್ಟಪಡಿಸಿದರು.

ನಿವೇಶಗಳ ನೋಂದಣಿಗಾಗಿ ಸಬ್‌ರಿಜಿಸ್ಟರ್ ಕಚೇರಿಗೆ ತೆರಳುವ ಸಾರ್ವಜನಿಕರಿಗೆ ಪುರಸಭೆಯಿಂದ ಆಕ್ಷೇಪಣೆ ಪ್ರಮಾಣ ಪತ್ರ ತರುವಂತೆ ಒತ್ತಾಯಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧ ಪಟ್ಟಂತೆ ಮಾರಾಟ ಅಥವಾ ಖರೀದಿ ಮಾಡುವ ನಿವೇಶನ, ಮನೆ ಇತರೆ ಯಾವುದೇ ಪರಭಾರೆಯಾಗುವ ಆಸ್ತಿಗಳ ನೋಂದಣಿಗೆ ಪುರಸಭೆಯಿಂದ ಪ್ರಮಾಣ ಪತ್ರ ಪಡೆಯುವ ಅವಶ್ಯಕತೆ ಇರುವುದಿಲ್ಲ.

ಆದರೆ, ಹಳೆಯ ಇ-ಸ್ವತ್ತಿನ ಆಧಾರದ ಮೇಲೆ ನೋಂದಣಿ ಮಾಡಿಸಿಕೊಂಡರೆ ಪುರಸಭೆಗೆ ಕಂದಾಯ ಸಂದಾಯವಾಗುವುದಿಲ್ಲ ಎಂಬ ಕಾರಣಕ್ಕೆ ಪ್ರಸಕ್ತ ದಿನಾಂಕದ ಇ-ಸ್ವತ್ತು ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಕ್ಷೇಪಣೆ ಪತ್ರ ನೀಡಲು ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನವಿಲ್ಲ. ಸಬ್‌ರಿಜಿಸ್ಟರ್ ಕಚೇರಿಯ ಅಧಿಕಾರಿಗಳಿಗೆ ಈ ರೀತಿ ಪ್ರಮಾಣ ಪತ್ರದ ಅಗತ್ಯವಿದ್ದರೆ ಪತ್ರ ವ್ಯವಹಾರ ಮಾಡಲಿ. ಈ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ವಿವರಣೆ ನೀಡಲಾಗುವುದು.

ಒಂದು ವೇಳೆ ನಿವೇಶನ ಮತ್ತು ಇತರೆ ಆಸ್ತಿಗಳ ಮಾಲೀಕತ್ವದ ಬಗ್ಗೆ ಸಬ್ ರಿಜಿಸ್ಟರ್ ಅವರಿಗೆ ಗೊಂದಲವಿದ್ದರೆ ಹೊಸ ಇ-ಸ್ವತ್ತಿನ ಆಧಾರದ ಮೇಲೆ ಆಸ್ತಿ ನೋಂದಣಿ ಮಾಡಬಹುದು. ಉಪನೋಂದಣಾಧಿಕಾರಿಗಳು ಈ ಬಗ್ಗೆ ಚರ್ಚೆ ಮಾಡಿದಾಗಲೂ ಪ್ರಮಾಣ ಪತ್ರ ಕೊಡಲು ಪುರಸಭೆ ಅಧಿಕಾರಿಗಳಿಗೆ ಅಧಿಕಾರಿವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೂ, ಈ ರೀತಿಯ ಗೊಂದಲ ಯಾಕೆ ಉಂಟಾಗಿದೆ ಎಂಬುದು ತಿಳಿದಿಲ್ಲ. ಹೀಗಾಗಿ ಸಾರ್ವಜನಿಕರು ಗೊಂದಲಕ್ಕೊಳಗಾಗ ಬಾರದು ಎಂದು ತಿಳಿಸಿದರು.