ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಬನಾಯೇಂಗೆ ಮಂದಿರ್ ಹಾಡು ಹಾಕಬಾರದು. ಈ ಹಾಡು ಹಾಕಿದರೆ ನಮ್ಮ ಮನಸ್ಸಿಗೆ ನೋವಾಗುತ್ತದೆ ಎನ್ನುವ ಮೂಲಕ ಸೌಹಾರ್ದತಾ ಸಭೆಯಲ್ಲಿ ಶಾಂತಿ ಕದಡಲು ಮುಂದಾದ ಮುಸ್ಲಿಂ ವ್ಯಕ್ತಿಗೆ, "ಕೇಸ್ ಜಡಿದು, ಒಳಗೆ ಹಾಕಬೇಕಾದೀತು " ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಎಚ್ಚರಿಸಿದ ಘಟನೆ ನಡೆಯಿತು.ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ಗೌರಿ ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧ್ಯಕ್ಷತೆಯಲ್ಲಿ ನಾಗರೀಕ ಸೌಹಾರ್ದ ಸಭೆ ಶಾಂತಿಯುತವಾಗಿ ನಡೆಯುತ್ತಿತ್ತು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಭಾಷಣ ಮಾಡುವ ಮುನ್ನ ಮುಸ್ಲಿಂ ವ್ಯಕ್ತಿಯೊಬ್ಬರು, ಗಣೇಶೋತ್ಸವ ಮೆರವಣಿಗೆಯಲ್ಲಿ ಬನಾಯೇಂಗೆ ಮಂದಿರ್ ಹಾಡನ್ನು ಹಾಕುವುದು ಬೇಡ. ನಮ್ಮ ಮನಸ್ಸಿಗೆ ನೋವಾಗುತ್ತದೆ. ಈಗಾಗಲೇ ಮಂದಿರವನ್ನು ಕಟ್ಟಿಯಾಗಿದೆ. ಮತ್ತೆ ಯಾಕೆ ಈ ಹಾಡು ಹಾಕುತ್ತೀರಿ ಎಂಬುದಾಗಿ ಪ್ರಶ್ನಿಸಿದರು. ಈ ವೇಳೆ ಹಿಂದು ಸಂಘಟನೆಗಳ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಗಲಾಟೆ ಶುರು ಮಾಡಿದ್ದರಿಂದ ಸಭಾಂಗಣದಲ್ಲಿ ವಾತಾವರಣ ಗದ್ದಲವಾಗಿ ಮಾರ್ಪಟ್ಟಿತು.
ಚನ್ನಗಿರಿಯ ಹಿಂದು ಸಂಘಟನೆಯ ಮುಖಂಡರೊಬ್ಬರು ಮಾತನಾಡಿ, ಬನಾಯೇಂಗೆ ಮಂದಿರ್ ಹಾಡು ಹಾಕಿದರೆ ನಿಮ್ಮ ಮನಸ್ಸಿಗೆ ನೋವಾಗುತ್ತದೆ ನಿಜ.ಆದರೆ, ಚನ್ನಗಿರಿ ಪೊಲೀಸ್ ಠಾಣೆ ಮತ್ತು ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೆ, ಸಾರ್ವಜನಿಕ ಸ್ವತ್ತಿನ ಮೇಲೆ ಕಲ್ಲು ತೂರಾಟ ಮಾಡಿ, ಬೆಂಕಿ ಹಚ್ಚಿದಾಗ ಆ ಕುಟುಂಬಕ್ಕೆ ನೋವಾಗಲಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಹಿಂದುಪರ ಸಂಘಟನೆಗಳ ಮುಖಂಡರು ಜೋರಾಗಿ ಗಲಾಟೆ ಶುರು ಮಾಡಿದರು.ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಜಿಲ್ಲಾಧಿಕಾರಿ ಅವರು ಮಧ್ಯ ಪ್ರವೇಶಿಸಿ, ಹಾಡನ್ನು ಹಾಕದಂತೆ ಹೇಳಿದ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. "ಇದೇ ರೀತಿ ನ್ಯೂಸೆನ್ಸ್ ಕ್ರಿಯೇಟ್ ಮಾಡುವ ಮಾತುಗಳನ್ನಾಡಿದರೆ ಕೇಸ್ ಜಡಿದು ಒಳಗೆ ಹಾಕಬೇಕಾಗುತ್ತದೆ. ನಾನು ಇಲ್ಲಿ ಇರುವವೆರೆಗೂ ಬಾಲ ಬಿಚ್ಚಿದರೆ ಪರಿಣಾಮ ನೆಟ್ಟಗಿರುವುದಿಲ್ಲ " ಎಂದು ಖಡಕ್ ಎಚ್ಚರಿಕೆ ನೀಡಿದರು.