ರಾಜ್ಯಾದ್ಯಂತ 2400 ಚದರಡಿವರೆಗಿನ ನಿವೇಶನದಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣ ಪತ್ರ (ಓಸಿ) ಒದಗಿಸುವುದರಿಂದ ಒಂದು ಬಾರಿಯ ಕ್ರಮವಾಗಿ ವಿನಾಯಿತಿ ನೀಡಿ ಇಂಧನ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ರಾಜ್ಯಾದ್ಯಂತ 2400 ಚದರಡಿವರೆಗಿನ ನಿವೇಶನದಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣ ಪತ್ರ (ಓಸಿ) ಒದಗಿಸುವುದರಿಂದ ಒಂದು ಬಾರಿಯ ಕ್ರಮವಾಗಿ ವಿನಾಯಿತಿ ನೀಡಿ ಇಂಧನ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.

2026ರ ಮೇ 31ರ ಒಳಗಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಪ್ರಕರಣ, ​ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿ ಪೂರ್ಣಗೊಳಿಸಿರುವ ಪ್ರಕರಣ ಹಾಗೂ ​ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವ ಪ್ರಕರಣಗಳಿಗೆ ಅನ್ವಯವಾಗುವಂತೆ ಈ ವಿನಾಯಿತಿ ಆದೇಶ ನೀಡಲಾಗಿದೆ.​ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯದ ಹಿನ್ನೆಲೆಯಲ್ಲಿ ಈ ಆದೇಶ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.

ಆದೇಶದ ಪ್ರಕಾರ, ​ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ, ರಾಜ್ಯದಲ್ಲಿನ ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ವಿನಾಯಿತಿ ನೀಡಲಾಗಿದೆ.

​ಕಟ್ಟಡದ ವಿಸ್ತೀರ್ಣ ಮತ್ತು ಮಿತಿ ಏನು?:

2400 ಚದರ ಅಡಿಗಳವರೆಗೆ ಅಳತೆಯ ನಿವೇಶನಗಳಲ್ಲಿ 20% ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ ನಿರ್ಮಿಸಿರುವ ಜಿ+3 (G+3) ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ಮಾತ್ರ ಈ ವಿನಾಯಿತಿ ಅನ್ವಯಿಸುತ್ತದೆ.

15 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು:

ಆದೇಶ ಹೊರಡಿಸಿದ ದಿನಾಂಕದಿಂದ ಅಂದರೆ ಜೂನ್ 22, 2026 ರಿಂದ ಮುಂದಿನ 15 ದಿನಗಳ ಒಳಗಾಗಿ ಹೊಸ ಶಾಶ್ವತ ವಿದ್ಯುತ್‌ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

​ಈ ಆದೇಶದ ಅನ್ವಯ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಸಾರ್ವಜನಿಕರಿಗೆ ವಿದ್ಯುತ್ ಸಂಪರ್ಕ ನೀಡಲು ಅನುಸರಿಸಬೇಕಾದ ಸಾಮಾನ್ಯ ಮಾರ್ಗಸೂಚಿಗಳನ್ನು ಇಂಧನ ಇಲಾಖೆಯು ಪ್ರತ್ಯೇಕವಾಗಿ ಶೀಘ್ರದಲ್ಲೇ ಹೊರಡಿಸುವುದಾಗಿ ತಿಳಿಸಿದೆ.​ಗ್ರಾಮೀಣ ಪ್ರದೇಶ, ರೈತರಿಗೆ ಓಸಿ ಬೇಕಿಲ್ಲ:

ಗ್ರಾಮೀಣ ಪ್ರದೇಶಗಳಲ್ಲಿ ರೈತರು ವಾಸಿಸುವ ಮನೆಗಳು ಹಾಗೂ ಕೃಷಿ ಪೂರಕ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣಪತ್ರ (ಓಸಿ) ಪಡೆಯುವುದರಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ​ರೈತರು ವಾಸಿಸುವ ಮನೆ ಮತ್ತು ತೋಟದ ಮನೆ, ​ಕೃಷಿ ಉಪಕರಣಗಳನ್ನು ಇಡುವ ಮನೆ, ​ದನದ ಕೊಟ್ಟಿಗೆ ಹಾಗೂ ರೇಷ್ಮೆ ಗೂಡಿನ ಮನೆಗಳಿಗೆ ವಿನಾಯಿತಿ ನೀಡಲಾಗಿದೆ.ವಿದ್ಯುತ್‌ ಸಂಪರ್ಕಕ್ಕೆ ಜಿಯೋ ಟ್ಯಾಗ್‌ ಬೇಕು:

ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಒ.ಸಿ. ಇಲ್ಲದೆ ಅರ್ಜಿ ಸಲ್ಲಿಸುವ ಅರ್ಜಿದಾರರು ಕಟ್ಟಡದ ಭೌಗೋಳಿಕ ಮಾಹಿತಿ, ದಿನಾಂಕ ಮತ್ತು ಸಮಯವನ್ನು ಒಳಗೊಂಡ ಜಿಯೋ ಟ್ಯಾಗ್ ಪೋಟೋವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ಬೆಸ್ಕಾಂ ಮಾರ್ಗಸೂಚಿ ಪ್ರಕಟಿಸಿದೆ.ಅರ್ಜಿದಾರರು ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಕ್ಷೇತ್ರಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕಟ್ಟಡ ಪೂರ್ಣಗೊಂಡಿರುವುದನ್ನು ಖಾತರಿಪಡಿಸಿಕೊಂಡು ಪರಿಶೀಲನಾ ವರದಿ ನೀಡಬೇಕು.ಈ ವೇಳೆ ತಮ್ಮ ಛಾಯಾಚಿತ್ರ ಹಾಗೂ ಸಮಯ, ಭೌಗೋಳಿಕ ಮಾಹಿತಿ ಇರುವ ಜಿಯೋ ಟ್ಯಾಗ್ ಛಾಯಾಚಿತ್ರವನ್ನು ಸಹಾಯಕ ಎಂಜಿನಿಯರ್‌ ಅವರ ಕಚೇರಿಗೆ ಸಲ್ಲಿಸಬೇಕು. ಸರ್ಕಾರ ಆದೇಶ ಹೊರಡಿಸಿದ 15 ದಿನಗಳ ನಂತರ ಯಾವುದೇ ಅರ್ಜಿಯನ್ನು ಕ್ಷೇತ್ರಾಧಿಕಾರಿಗಳು ಯಾವುದೇ ಹಂತದಲ್ಲಿ ಬಾಕಿ ಉಳಿಸಿಕೊಳ್ಳಬಾರದು. ಸರ್ಕಾರದ ಆದೇಶದಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಕುರಿತು ಖಚಿತಪಡಿಸಿಕೊಂಡ ನಂತರವೇ ಸಹಾಯಕ ಎಂಜಿನಿಯರ್‌ ಅವರ ಸಿಸಿಬಿ ತಂತ್ರಾಂಶದಲ್ಲಿ ಅರ್ಜಿಯನ್ನು ಅಪ್‌ಲೋಡ್‌ ಮಾಡಬೇಕು.ವಿದ್ಯುತ್‌ ಸಂಪರ್ಕ ನೀಡಿದ ಬಳಿಕ ಅರ್ಜಿದಾರರು ಹಾಗೂ ವಿದ್ಯುತ್‌ ಸಂಪರ್ಕ ಕಲ್ಪಿಸಿರುವ ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ಣಗೊಂಡಿರುವ ಕಟ್ಟಡದ ಭೌಗೋಳಿಕ ಮಾಹಿತಿ ಹಾಗೂ ದಿನಾಂಕ, ಸಮಯ ಹಾಗೂ ಜಿಯೋ ಟ್ಯಾಗ್ ಆಧರಿತ ಫೋಟೋವನ್ನು ಅಪಲೋಡ್ ಮಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.