ಧಾರವಾಡ:

ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಹೋದ ವೇಳೆ ನಡೆದ ಗಲಾಟೆಯಿಂದ ಆಕ್ರೋಶಗೊಂಡ ಗರಗ ಗ್ರಾಮದ ಮೋಹನ ಜ್ಯುವೆಲರಿ ಅಂಗಡಿ ಮಾಲೀಕ, ತಂದೆ-ಮಗನ ಮೇಲೆ ಹಲವು ಸುತ್ತಿನ ಗುಂಡು ಹಾರಿಸಿ ಭಯಭೀತ ವಾತಾವರಣ ಸೃಷ್ಟಿಸಿದ ದುರ್ಘಟನೆ ಸೋಮವಾರ ಸಂಜೆ ನಡೆದಿದೆ.

ಈ ಘಟನೆಯಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿದ್ದು ಬಾಲಕಿಯ ಕಾಲನ್ನು ಗುಂಡು ತರಚಿಕೊಂಡು ಹೋಗಿದೆ.

ಮೋಹನ ಜುವೆಲೆರ್ಸ್‌ ಮಾಲೀಕ, ಗರಗ ನಿವಾಸಿ ಮೌನೇಶ ರುದ್ರಪ್ಪ ಬಡಿಗೇರ (50) ಎಂಬಾತನೇ ಮನಸೋ ಇಚ್ಛೆ ಗುಂಡು ಹಾರಿಸಿದ ಆರೋಪಿ.

ಘಟನೆಯಲ್ಲಿ ಸಮೀಪದ ಜೀರಿಗವಾಡ ಗ್ರಾಮದ ನಿಂಗಪ್ಪ ಹೊರಕೇರಿ (64), ಅವರ ಪುತ್ರ ಸಿದ್ದಪ್ಪ ಹೊರಕೇರಿ (30) ಹಾಗೂ ಶಾಲೆಯಿಂದ ಮನೆಗೆ ಮರಳುತ್ತಿದ್ದ ನಾಲ್ಕನೇ ತರಗತಿ ಓದುತ್ತಿದ್ದ ಒಂಭತ್ತು ವರ್ಷದ ಬಾಲಕಿಗೂ ಗಾಯಗಳಾಗಿವೆ.


ಗರಗ ಗ್ರಾಮದ ಮಾರುಕಟ್ಟೆ ಪ್ರದೇಶದಲ್ಲಿರುವ ಮೌನೇಶ ಜ್ಯುವೆಲರಿ ಬಳಿ ಮನೆಯ ಸಮಸ್ಯೆಗಾಗಿ ನಿಂಗಪ್ಪ ಹೊರಕೇರಿ ಕೆಲವು ತಿಂಗಳ ಹಿಂದೆ ₹ 60 ಸಾವಿರಕ್ಕೆ ಚಿನ್ನ ಅಡವಿಟ್ಟಿದ್ದರು. ಸೋಮವಾರ ಹಣ ಕೊಟ್ಟು ಬಂಗಾರ ಬಿಡಿಸಿಕೊಳ್ಳಲು ಹೋದಾಗ ಅಂಗಡಿ ಮಾಲೀಕ ಮೌನೇಶ, ಬಂಗಾರ ಮರಳಿಸಲು ಹಿಂದೇಟು ಹಾಕಿದ್ದಾನೆ. ಆಗ ಇಬ್ಬರು ಮಧ್ಯೆ ಮಾತಿನ ಚಕಮಕಿ ಉಂಟಾಗಿದ್ದು, ಏಕಾಏಕಿ ಮೋಹನ ತಂದೆ-ಮಗನ ಮೇಲೆ ಹಲವು ಸುತ್ತಿನ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ನಿಂಗಪ್ಪನ ಕಾಲಿಗೆ ಗಾಯವಾಗಿದ್ದು, ಮಗ ಸಿದ್ದಪ್ಪನ ಹೊಟ್ಟೆಗೆ ಗುಂಡು ಬಿದ್ದಿದೆ. ಹಲವು ಸುತ್ತಿನ ಗುಂಡು ಹಾರಿಸಿದ ಸಂದರ್ಭದಲ್ಲಿ ಜ್ಯುವೆಲರಿ ಎದುರು ಶಾಲೆಯಿಂದ ಮನೆಗೆ ಹೋಗುತ್ದಿದ್ದ ಬಾಲಕಿಗೂ ಗಾಯವಾಗಿದೆ.

ಕೂಡಲೇ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಜ್ಯುವೆಲರಿ ಮಾಲೀಕ ಮೋಹನ ಅಡವಿಟ್ಟ ಚಿನ್ನವನ್ನು ಬೇರೆಯವರಿಗೆ ಕೊಟ್ಟಿದ್ದಾನೆ. ಆಕ್ರೋಶಗೊಂಡ ತಂದೆ-ಮಗನ ಮೇಲೆ ಗುಂಡು ಹಾರಿಸಿದ್ದಾನೆಂದು ಪ್ರಾಥಮಿಕ ಮಾಹಿತಿ ದೊರೆತಿದೆ.ಘಟನೆಯಲ್ಲಿ ನಿಂಗಪ್ಪ ಹಾಗೂ ಬಾಲಕಿಗೆ ಅಲ್ಪ ಗಾಯವಾಗಿದ್ದು ಪುತ್ರ ಸಿದ್ದಪ್ಪನ ಹೊಟ್ಟೆಗೆ ಗಂಭೀರ ಗಾಯವಾಗಿದೆ. ತಕ್ಷಣವೇ ಗರಗ ಪೊಲೀಸರು ಆರೋಪಿ ಮೌನೇಶ ಬಂಧಿಸಿದ್ದು, ಆತನು ಬಳಸಿರುವ ಗನ್‌ ವಶಪಡಿಸಿಕೊಂಡು ಪರವಾನಗಿ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮಾಡಲಾಗುತ್ತಿದೆ.

ಗುಂಜನ್‌ ಆರ್ಯ ಪೊಲೀಸ್‌ ವರಿಷ್ಠಾಧಿಕಾರಿ, ಧಾರವಾಡ