ಸಾರಾಂಶ
ಅ. ೩ರಂದು ನವರಾತ್ರಿ ಉತ್ಸವ ಆರಂಭಗೊಳ್ಳಲಿದ್ದು, ಶಾರದಾ ಸನ್ನಿಧಿಯಲ್ಲಿ ಸಪ್ತಶತಿ ಪಾರಾಯಣ ಮತ್ತು ಗಣಪತಿ ಸನ್ನಿಧಿಯಲ್ಲಿ ಉಪನಿಷತ್ ಪಾರಾಯಣ ಮತ್ತು ಅಥರ್ವಶೀರ್ಷ ಹವನ ಆರಂಭಗೊಳ್ಳಲಿದೆ.
ಸಿದ್ದಾಪುರ: ಪಟ್ಟಣದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಅ. ೩ರಿಂದ ಅ. ೧೨ರ ವರೆಗೆ ಶರನ್ನವರಾತ್ರಿ ಉತ್ಸವ ಮತ್ತು ಸಂಸ್ಕೃತಿ ಸಂಪದೋತ್ಸವ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿ, ಅ. ೩ರಂದು ನವರಾತ್ರಿ ಉತ್ಸವ ಆರಂಭಗೊಳ್ಳಲಿದ್ದು, ಶಾರದಾ ಸನ್ನಿಧಿಯಲ್ಲಿ ಸಪ್ತಶತಿ ಪಾರಾಯಣ ಮತ್ತು ಗಣಪತಿ ಸನ್ನಿಧಿಯಲ್ಲಿ ಉಪನಿಷತ್ ಪಾರಾಯಣ ಮತ್ತು ಅಥರ್ವಶೀರ್ಷ ಹವನ ಆರಂಭಗೊಳ್ಳಲಿದೆ. ಅ. ೪ರಿಂದ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಲಲಿತಾ ಸಹಸ್ರನಾಮ ಹವನ, ರುದ್ರ ಹವನ, ಶ್ರೀ ಸೂಕ್ತ - ಪುರುಷ ಸೂಕ್ತ ಹವನ, ಚಂಡಿ ಹವನ, ದುರ್ಗಾ ಹವನ, ಶಾರದಾ ಪೂಜೆ, ದುರ್ಗಾಷ್ಟಮಿಯ ದುರ್ಗಾ ಪೂಜೆ, ಮಹಾನವಮಿ ನಡೆಯಲಿದೆ. ಅ. ೧೨ರಂದು ವಿಜಯದಶಮಿ ಉತ್ಸವ ಜರುಗಲಿದ್ದು, ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದರು. ಹಿತ್ಲಕೈನ ಒಡ್ಡೋಲಗದ ಮುಖ್ಯಸ್ಥ ಗಣಪತಿ ಹೆಗಡೆ ಮಾತನಾಡಿ, ನವರಾತ್ರಿ ಉತ್ಸವದ ಅಂಗವಾಗಿ ಪ್ರತಿ ದಿನ ಸಂಜೆ ೬.೩೦ರಿಂದ ಸಂಸ್ಕೃತಿ ಸಂಪದೋತ್ಸವ, ಸಂಗೀತ, ನಾಟಕ, ಯಕ್ಷಗಾನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅ. ೬ರಂದು ಒಡ್ಡೋಲಗ ರಂಗ ಪರ್ಯಟನ ೨೦೨೪ ಅವರ ಸಂಯೋಜನೆಯೊಂದಿಗೆ ಬಹುಮುಖಿ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಅ. ೭ರಂದು ಯಲ್ಲಾಪುರದ ವಿಭಾ ಹೆಗಡೆ ಮತ್ತು ಸಿದ್ದಾಪುರದ ಸುಧೀರ್ ಬೇಂದ್ರೆ ಅವರಿಂದ ಸಂಗೀತ ಗಾನಯಾನ ಕಾರ್ಯಕ್ರಮ ನಡೆಯಲಿದೆ. ಅ. ೮ರಂದು ಸಿದ್ದಾಪುರದ ರಂಗಸೌಗಂಧದಿಂದ ರಕ್ತರಾತ್ರಿ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಅ. ೯ರಂದು ಅಶೋಕ್ ಹುಗ್ಗಣ್ಣನವರ್ ಮತ್ತು ಕುಮಟಾದ ರೇಷ್ಮಾ ಭಟ್ ಅವರಿಂದ ಶಾಸ್ತ್ರೀಯ ಹಾಗೂ ಲಘು ಸಂಗೀತ ಕಾರ್ಯಕ್ರಮ ನಡೆಯಲಿದೆ. ಅ. ೧೨ರಂದು ಬಡಗಿನ ಖ್ಯಾತ ಕಲಾವಿದರ ಸಮಾಗಮದಲ್ಲಿ ನಳದಮಯಂತಿ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆಯುವ ಶಾರದಾದೇವಿ ಹಾಗೂ ಮಹಾಗಣಪತಿ ದೇವರ ಪೂಜಾ ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವತಾ ಅನುಗ್ರಹಕ್ಕೆ ಭಾಜನರಾಗಬೇಕೆಂದು ಕೋರಿದರು.ಸುದ್ದಿಗೋಷ್ಠಿಯಲ್ಲಿ ಭುವನಗಿರಿ ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು, ಸುಷಿರ ಸಂಗೀತ ಪರಿವಾರದ ನಾರಾಯಣ ಹೆಗಡೆ ಕಲ್ಲಾರೆಮನೆ, ಜಯರಾಮ ಭಟ್ ಗುಂಜಗೋಡು ಇದ್ದರು.