ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಬ್ಯಾರಿ ಭಾಷೆಗೆ ಮಾನ್ಯತೆ ನೀಡಿ, ರಾಜ್ಯ ಸರ್ಕಾರವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದ ದಿನವಾದ ಅಕ್ಟೋಬರ್ 3ರಂದು ‘ಬ್ಯಾರಿ ಭಾಷಾ ದಿನ’ವನ್ನು ಈ ಬಾರಿ ಸಕಲೇಶಪುರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷ ಯು.ಎಚ್. ಉಮರ್ ತಿಳಿಸಿದರು.ಪಟ್ಟಣದ ಆಕ್ಸ್ಫರ್ಡ್ ಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಭಾಷೆ ಎಂದರೆ ಸಂಸ್ಕೃತಿ. ಭಾಷೆಯ ಬಗ್ಗೆ ಅಭಿಮಾನ ಇರಬೇಕು. ಮನೆಯಲ್ಲಿ ಹೊರಗೆ ನೀವು ಯಾವುದೇ ಭಾಷೆ ಬಳಸಿದರೂ ಮನೆಯಲ್ಲಿ ಮಾತ್ರ ಬ್ಯಾರಿ ಭಾಷೆಯನ್ನೇ ಮಾತನಾಡಬೇಕು. ಭಾಷೆ ಉಳಿಯಬೇಕಾದರೆ ಅದರ ಬಳಕೆ ಅವಶ್ಯಕ. ಬ್ಯಾರಿ ಭಾಷಿಕರು ರಾಜ್ಯ ಹಾಗೂ ಅಂತರರಾಜ್ಯ ಮಟ್ಟದಲ್ಲಿ ಬದುಕನ್ನು ಕಟ್ಟಿಕೊಂಡಿದ್ದು, ಎಲ್ಲರೂ ಒಂದಾಗಬೇಕು. ಏಕತೆ ಇದ್ದಾಗ ಮಾತ್ರ ನಮ್ಮ ಏಳಿಗೆ ಸಾಧ್ಯ, ಇಲ್ಲದಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಹಿಜಾಬ್ ಸಮಸ್ಯೆಯ ವೇಳೆ ಬ್ಯಾರಿ ಸಮುದಾಯವು ಒಂದಾಗಿ ಎದುರಿಸಿದ ಉದಾಹರಣೆಯನ್ನು ಸ್ಮರಿಸಿದ ಅವರು, ಸಮುದಾಯ ಬೆಳೆಯುವುದಕ್ಕೆ ಮೊದಲು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ನಂತರ ಆರೋಗ್ಯದ ಕಡೆ ಗಮನ ನೀಡಬೇಕು. ಬಳಿಕ ಉತ್ತಮ ಸಂಬಂಧಗಳನ್ನು ರೂಢಿಸಿಕೊಳ್ಳಬೇಕು. ಅಂತಿಮವಾಗಿ ವಿದ್ಯೆಗೆ ಪ್ರಾಮುಖ್ಯತೆ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯೆ ಎಲ್ಲರಲ್ಲೂ ಇದ್ದರೂ ವ್ಯಕ್ತಿತ್ವ ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಕೊರತೆ ಕಾಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ರಾಜ್ಯದ ಎಲ್ಲಾ ಬ್ಯಾರಿ ಭಾಷಿಕರು, ಸಂಘ- ಸಂಸ್ಥೆಗಳು ಅಕ್ಟೋಬರ್ 3ರಂದು ಬ್ಯಾರಿ ಭಾಷಾ ದಿನವನ್ನು ಆಚರಿಸಬೇಕು ಎಂದು ಮನವಿ ಮಾಡಿದರು. ಈ ದಿನದಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಿತ್ತಿಪತ್ರ- ಬ್ಯಾನರ್‌ಗಳ ಪ್ರದರ್ಶನಗಳ ಮೂಲಕ ಭಾಷಾ ದಿನವನ್ನು ಆಚರಿಸಬೇಕು. ಈ ಬಾರಿ ಭಾಷಾ ದಿನಾಚರಣೆಯನ್ನು ಸಕಲೇಶಪುರದಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬ್ಯಾರಿ ಅಕಾಡೆಮಿಯ ರಾಜ್ಯ ಮುಖಂಡ ಬಿ.ಎಸ್. ಮೊಹಮ್ಮದ್, ಆಕ್ಸ್ಪರ್ಡ್ ಶಾಲೆಯ ಮುಖ್ಯಸ್ಥ ಯಾದ್ಗಾರ್ ಝಾಕೀರ್, ಆನೆಮಹಲ್ ಹಸೇನಾರ್, ಬೇಲೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಮಾಲ್, ಅಬ್ದುಲ್ಲ ಆಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.