ಕನ್ನಡಪ್ರಭ ವಾರ್ತೆ ರಾಮನಗರ/ಮೈಸೂರು
ಆಪರೇಷನ್ ಕಮಲ ಭಯದಿಂದ ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್‌ನಲ್ಲಿರುವ ಒಡಿಶಾದ ಕಾಂಗ್ರೆಸ್ ಶಾಸಕರು ಶನಿವಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ಮೈಸೂರಿಗೆ ಆಗಮಿಸಿ, ಚಾಮುಂಡಿಬೆಟ್ಟ ಹಾಗೂ ಮೈಸೂರು ಅರಮನೆಗೆ ಭೇಟಿ ನೀಡಿದರು. ಟ್ರಬಲ್ ಶೂಟರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆ ಹಿನ್ನೆಲೆಯಲ್ಲಿ 8 ಮಂದಿ ಶಾಸಕರು, ಪಿಸಿಸಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಬಿಡದಿಯ ರೆಸಾರ್ಟ್‌ನಿಂದ ಒಂದೇ ಬಸ್‌ನಲ್ಲಿ ಮೈಸೂರಿಗೆ ಆಗಮಿಸಿದರು. ಪ್ರವಾಸಿ ತಾಣಗಳನ್ನು ವೀಕ್ಷಿಸಿದರು.ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್ 16ರಂದು ಚುನಾವಣೆ ನಡೆಯಲಿದ್ದು, 10 ರಾಜ್ಯಗಳ ಶಾಸಕರು ರಾಜ್ಯಸಭಾ ಸದಸ್ಯರ ಆಯ್ಕೆಗೆ ಮತದಾನ ಮಾಡಲಿದ್ದಾರೆ. ಇದರಲ್ಲಿ ನಾಲ್ಕು ರಾಜ್ಯಸಭಾ ಸದಸ್ಯರನ್ನು ಒಡಿಶಾದ ಶಾಸಕರು ಚುನಾಯಿಸಲಿದ್ದಾರೆ. ಈ ಪೈಕಿ ನಾಲ್ಕನೇ ಸ್ಥಾನಕ್ಕೆ ಯಾವುದೇ ಪಕ್ಷದ ಬಳಿ ಸ್ಪಷ್ಟ ಸಂಖ್ಯಾ ಬಲ ಇಲ್ಲದ ಕಾರಣ ಒಡಿಶಾ ರಾಜಕೀಯದಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದೆ. ಆಡಳಿತಾರೂಢ ಬಿಜೆಪಿ ‘ಆಪರೇಷನ್ ಕಮಲ’ದ ಮೂಲಕ ಅಡ್ಡ ಮತದಾನಕ್ಕೆ ಯತ್ನಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಚುನಾವಣೆಯಲ್ಲಿ ಅಡ್ಡ ಮತದಾನ ತಡೆಯಲು ಒಡಿಶಾದ ಕಾಂಗ್ರೆಸ್ ಶಾಸಕರನ್ನು ರಾಮನಗರದ ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್‌ಗೆ ಕರೆ ತರಲಾಗಿದೆ.
ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಬಿಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಖ್ಯಾತ ಮೂತ್ರಪಿಂಡ ತಜ್ಞ ದತ್ತೇಶ್ವರ ಹೋಟಾ ಅವರನ್ನು ಕಣಕ್ಕಿಳಿಸಿವೆ. ಪ್ರಖ್ಯಾತ ಹೋಟೆಲ್ ಉದ್ಯಮಿ ಮತ್ತು ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರು ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.