ಬಂಟ್ವಾಳ: ನಗರದ ಬೇರು ಹಳ್ಳಿಯಲ್ಲಿದ್ದು, ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ನಗರಗಳ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಆ. 8ರಂದು ನಡೆಯಲಿರುವ ಶ್ರೀಗಳ ಜನ್ಮದಿನೋತ್ಸವ, ಗ್ರಾಮೋತ್ಸವ ಹಾಗೂ ಗುರುವಂದನೆ ಸೇವಾ ಸಂಭ್ರಮದ ಅಂಗವಾಗಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.

ಹುಟ್ಟುಹಬ್ಬದ ಆಚರಣೆ ಹಿಂದೆ ಕಲ್ಮಷರಹಿತ ಸೇವೆ ಹಾಗೂ ಅಹಂಕಾರವಿಲ್ಲದ ಕರ್ಮದ ಸಂದೇಶ ಅಡಗಿದೆ. ನಿಜವಾದ ಗುರುಸೇವೆ ಎಂದರೆ ನಿಸ್ವಾರ್ಥ ಸೇವೆ ಮತ್ತು ಅಹಂಕಾರ ರಹಿತ ಜೀವನ. ಅಹಂಕಾರ ಹಾಗೂ ಮಮಕಾರ ಬೆಳೆಸಿಕೊಂಡರೆ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಸಂತನು ಸಮಾಜಮುಖಿಯಾಗಿ ಮಾರ್ಗದರ್ಶನ ನೀಡಬೇಕು. ಪರೋಪಕಾರವೇ ಮನುಷ್ಯನ ಬದುಕಿನ ಧ್ಯೇಯವಾಗಿದ್ದು, ಗ್ರಾಮೋತ್ಸವದಂತಹ ಕಾರ್ಯಕ್ರಮಗಳು ಮಾನವ ಧರ್ಮವನ್ನು ಜಾಗೃತಗೊಳಿಸುವ ವೇದಿಕೆಯಾಗಬೇಕು. ಇನ್ನೊಬ್ಬರ ಕಷ್ಟಕ್ಕೆ ಧ್ವನಿಯಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ಸೇವೆಯೇ ಸಾಧನೆಯಾದಾಗ ಅದು ಸಂಭ್ರಮವಾಗುತ್ತದೆ ಮತ್ತು ಬದುಕಿಗೆ ಸಾರ್ಥಕತೆ ದೊರೆಯುತ್ತದೆ ಎಂದು ಹೇಳಿದರು.

ಸಾದ್ವಿಶ್ರೀ ಮಾತಾನಂದಮಯಿ ದಿವ್ಯ ಸಾನಿಧ್ಯ ವಹಿಸಿದ್ದರು. ಕಳೆದ ವರ್ಷದ ಗ್ರಾಮೋತ್ಸವ ಸಮಿತಿ ಪದಾಧಿಕಾರಿಗಳಾದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಸಹಕಾರ ರತ್ನ ಎ. ಸುರೇಶ್ ರೈ, ಕೃಷ್ಣ ಶೆಟ್ಟಿ ತಾರೇಮಾರ್, ಕದ್ರಿ ನವನೀತ ಶೆಟ್ಟಿ, ಸೇರಾಜೆ ಗಣಪತಿ ಭಟ್, ವಿಶ್ವನಾಥ ಶೆಟ್ಟಿ ಹಾಗೂ ವೆಂಕಟರಮಣ ಹೊಳ್ಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗಾಗಿ ನೂತನ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸಿ, ಗ್ರಾಮೋತ್ಸವದ ರೂಪುರೇಷೆಗಳನ್ನು ಅಂತಿಮಗೊಳಿಸಲಾಯಿತು. ಗ್ರಾಮೋತ್ಸವಕ್ಕೆ ಪೂರಕವಾಗಿ ಕೆಸರುಗದ್ದೆ ಕ್ರೀಡಾಕೂಟ, ಒಳಾಂಗಣ ಆಟಗಳು, ಆರೋಗ್ಯ ಶಿಬಿರ ಸೇರಿದಂತೆ ವಿವಿಧ ಸಾಮಾಜಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಯಿತು.ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಒಡಿಯೂರು ಗ್ರಾಮಾಭಿವೃದ್ಧಿ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಮಾತೇಶ ಭಂಡಾರಿ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ವಂದಿಸಿದರು. ಒಡಿಯೂರು ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ನಿರೂಪಿಸಿದರು.


ಅಪರಾಹ್ನ ನೂತನ ಸಮಿತಿ ಹಾಗೂ ಉಪ ಸಮಿತಿಗಳ ಪ್ರತ್ಯೇಕ ಸಭೆಗಳು ನಡೆಯುವ ಮೂಲಕ ಗ್ರಾಮೋತ್ಸವದ ಸಿದ್ಧತೆಗಳಿಗೆ ಚಾಲನೆ ನೀಡಲಾಯಿತು.