ಸಾರಾಂಶ
.ತಾಲೂಕಿನಲ್ಲಿರುವ ಶಿವಾಲಯಗಳಲ್ಲಿ ಹಾಗೂ ಇತರ ದೇವಾಲಯಗಳಲ್ಲಿ ವಿಶೇಷ ಪೂಜಾವಿಧಿಗಳು ಜರುಗಿದವು.
ಹಳಿಯಾಳ: ತಾಲೂಕಿನಾದ್ಯಂತ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಶಿವರಾತ್ರಿಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.ತಾಲೂಕಿನಲ್ಲಿರುವ ಶಿವಾಲಯಗಳಲ್ಲಿ ಹಾಗೂ ಇತರ ದೇವಾಲಯಗಳಲ್ಲಿ ವಿಶೇಷ ಪೂಜಾವಿಧಿಗಳು ಜರುಗಿದವು.
ಬುಧವಾರ ಪ್ರಾತಃಕಾಲದಿಂದಲೇ ಶಿವಭಕ್ತರು ಶಿವಾಲಯಗಳಿಗೆ ತೆರಳಿ ಪರಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಹಾಗೂ ಶ್ವೇತ ಹೂವುಗಳನ್ನು ಅರ್ಪಿಸಿ ಪ್ರಾರ್ಥಿಸಿ ಪುಣಿತರಾದರು. ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಸೇರಿದಂತೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಶಿವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದರು.ಪಟ್ಟಣದ ಕೋಟೆಯಲ್ಲಿರುವ 900ಕ್ಕೂ ಹೆಚ್ಚು ವರ್ಷಗಳಷ್ಟು ಪುರಾತನವಾದ ಮಲ್ಲಿಕಾರ್ಜುನ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಭಕ್ತರು ಸರದಿಯಲ್ಲಿ ನಿಂತು ಶಿವದರ್ಶನ ಪಡೆದರು. ಇಲ್ಲಿಯ ಚಿಬ್ಬಲಗೇರಿ ರಸ್ತೆಯಲ್ಲಿನ ಕೈಗಾರಿಕಾ ಬಡಾವಣೆಯಲ್ಲಿನ ವೀರಶೈವ ಲಿಂಗಾಯತ ಸಮಾಜದ ಶಾಂತಿಧಾಮದಲ್ಲಿನ ಶಿವಮಂದಿರದಲ್ಲಿ ಪೂಜಾ ಧಾರ್ಮಿಕ ವಿಧಿಗಳು ನಡೆದವು.
ಪಟ್ಟಣದಲ್ಲಿನ ಪೇಟೆಯ ಬಸವೇಶ್ವರ ದೇವಸ್ಥಾನ, ಮೈಲಾರಲಿಂಗ ದೇವಸ್ಥಾನ, ಸಿದ್ದರಾಮೇಶ್ವರ ದೇವಸ್ಥಾನದಲ್ಲಿ, ತುಳಜಾಭವಾನಿ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ದತ್ತಾತ್ರೇಯ ದೇವಸ್ಥಾನ, ಗಣೇಶ ದೇವಸ್ಥಾನ, ನಾಗದೇವಸ್ಥಾನದಲ್ಲಿ ಭಕ್ತರ ಮಹಾಪೂರವೇ ಹರಿದುಬಂದಿತ್ತು. ಶಿವರಾತ್ರಿಯ ನಿಮಿತ್ತ ಸ್ಥಳೀಯ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದವರು ಕಾರ್ಯಕ್ರಮಗಳನ್ನು ಆಯೋಜಿಸಿ ಶಿವರಾತ್ರಿಯ ಮಹೋತ್ಸವದ ವಿಶೇಷತೆ ಸಾರಿದರು.ಗ್ರಾಮೀಣ ಭಾಗದಲ್ಲಿಯೂ ಶಿವಧ್ಯಾನ:
ಗ್ರಾಮೀಣ ಭಾಗಗಳಲ್ಲಿಯ ಬಿ.ಕೆ.ಹಳ್ಳಿ, ಮಂಗಳವಾಡದ ಕಲ್ಮೇಶ್ವರ ದೇವಸ್ಥಾನ, ಕಾಳಗಿನಕೊಪ್ಪನ ಪೀಶೆ ಲಿಂಗೇಶ್ವರ ದೇವಸ್ಥಾನ, ಕಾವಲವಾಡದ ಸೋಮೇಶ್ವರ ದೇವಸ್ಥಾನ, ಕರ್ಲಕಟ್ಟಾ ಬಳಿಯಿರುವ ಶನಿಧಾಮಕ್ಕೆ ಭಾರಿ ಸಂಖ್ಯೆಯಲ್ಲಿ ಶಿವ ಭಕ್ತರು ತೆರಳಿ ಶಿವದರ್ಶನ ಮಾಡಿದರು.