ಸಾರಾಂಶ
ಲಿಂಗಸುಗೂರು ತಾಲೂಕಿನ ಯರಡೋಣಿ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮಸೀದಿಯಲ್ಲಿ ಅನ್ನಸಂತರ್ಪಣೆ ಮಾಡುವುದರ ಮುಖಾಂತರ ಭಾವೈಕ್ಯತೆ ಮೆರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಮುಸ್ಲಿಂ ಬಾಂಧವರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಮಸೀದಿಯಲ್ಲಿ ಅನ್ನಸಂತರ್ಪಣೆ ಮಾಡುವ ಮೂಲಕ ಭಾವೈಕ್ಯತೆ ಮರೆದಿರುವ ಘಟನೆ ತಾಲೂಕಿನ ಯರಡೋಣಾ ಗ್ರಾಮದಲ್ಲಿ ನಡೆದಿದೆ.ಹಿಂದೂ-ಮುಸ್ಲಿಂ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರುವ ನಿಟ್ಟಿನಲ್ಲಿ ಗ್ರಾಮದ ಮುಸ್ಲಿಂ ಯುವಕರು ಸೇರಿಕೊಂಡು ಅಯ್ಯಪ್ಪ ಸ್ವಾಮಿ ಮಾಲಾಧಾರಿ ಗಳಿಗೆ ಗ್ರಾಮದ ಜಾಮೀಯಾ ಮಸೀದಿಯಲ್ಲಿ ಊಟದ ವ್ಯವಸ್ಥೆಯನ್ನು ಮಾಡುವುದರ ಮುಖಾಂತರ ಕೋಮುಸೌಹಾರ್ದತೆಯನ್ನು ಇನ್ನಷ್ಟು ಗಟ್ಟಿಕೊಳಿಸುವ ಪ್ರಯತ್ನವನ್ನು ಮಾಡಿದ್ದಾರೆ.ಭಾರತ ಭಾವೈಕ್ಯತೆಯ ನಾಡು, ಧರ್ಮ ಯಾವುದೇ ಇರಲಿ ನಾವೆಲ್ಲರೂ ಮಾನವರು, ಮಾನವ ಧರ್ಮ ಒಂದೇ ಎಂದು ಸಾರಿದರು. ಭಕ್ತಿ ಸೇವೆಗೆ ಯಾವುದೇ ಧರ್ಮದ ಭೇದವಿಲ್ಲ, ಜಾತಿ ಧರ್ಮ ಎಣಿಸದೇ ಮಾನವಕುಲಕ್ಕೆ ಒಳಿತನ್ನು ಬಯಸುವುದೇ ನಿಜವಾದ ಧರ್ಮ ಎಂದು ಮಜಹರ್ ಖಾಲಿದ್ ಹೇಳಿದರು.ಅಯ್ಯಪ್ಪ ಭಕ್ತರಿಗೆ ಯಾವುದೇ ಜಾತಿ, ಧರ್ಮದ ಭೇದ-ಭಾವ ಇಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಯಾವುದೇ ಧರ್ಮದವರು ಮನೆಯಲ್ಲಿ ಪೂಜೆ ಮಾಡಲು ಮತ್ತು ಪ್ರಸಾದ ಸ್ವೀಕರಿಸಲು ಅವಕಾಶವಿದೆ. ಭಕ್ತಿಯಿಂದ ಆಹ್ವಾನ ನೀಡಿದರೆ ನಾವು ಎಂದಿಗೂ ತಿರಸ್ಕರಿಸುವುದಿಲ್ಲ ಎಂದು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಸಿರಾಜ್ ತೋಟದ್, ಹಾಜಿಬಾಬು ಸರಾಫ್, ಖಾಸಿಂಸಾಬ್, ನಬೀಸಾಬ್ ಸೇರಿದಂತೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಇದ್ದರು.