ಪವಿತ್ರ ತಲಕಾವೇರಿ ತೀರ್ಥೋದ್ಭವದ 10ನೇ ದಿನವಾದ ಪತ್ತಲೋಧಿ ಪುಣ್ಯ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ಮಡಿಕೇರಿ ಕೋಟೆ ಆವರಣ ಮತ್ತು ನಾಲ್ನಾಡ್ ಅರಮನೆಗಳಲ್ಲಿ ತರ್ಪಣ (ಮೀದಿ) ಅರ್ಪಿಸಿ, ಕೊಡವ ಯೋಧರು, ಐತಿಹಾಸಿಕ ಹಿಂಸಾಚಾರಕ್ಕೆ ಬಲಿಯಾದ ಕೊಡವ ಸಂತ್ರಸ್ತರು ಹಾಗೂ ಪೂರ್ವಜರನ್ನು ಭಕ್ತಿ ಮತ್ತು ಗೌರವದಿಂದ ಸ್ಮರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪವಿತ್ರ ತಲಕಾವೇರಿ ತೀರ್ಥೋದ್ಭವದ 10ನೇ ದಿನವಾದ ಪತ್ತಲೋಧಿ ಪುಣ್ಯ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ಮಡಿಕೇರಿ ಕೋಟೆ ಆವರಣ ಮತ್ತು ನಾಲ್ನಾಡ್ ಅರಮನೆಗಳಲ್ಲಿ ತರ್ಪಣ (ಮೀದಿ) ಅರ್ಪಿಸಿ, ಕೊಡವ ಯೋಧರು, ಐತಿಹಾಸಿಕ ಹಿಂಸಾಚಾರಕ್ಕೆ ಬಲಿಯಾದ ಕೊಡವ ಸಂತ್ರಸ್ತರು ಹಾಗೂ ಪೂರ್ವಜರನ್ನು ಭಕ್ತಿ ಮತ್ತು ಗೌರವದಿಂದ ಸ್ಮರಿಸಲಾಯಿತು.ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡೂ ಐತಿಹಾಸಿಕ ಸ್ಥಳಗಳಲ್ಲಿ ಪುಷ್ಪಾರ್ಚನೆ ಹಾಗೂ ತರ್ಪಣ ಅರ್ಪಿಸಲಾಯಿತು.

ಮಡಿಕೇರಿ ಕೋಟೆ ಆವರಣದಲ್ಲಿ ಹಿಂದಿನ ಆಡಳಿತಗಳ ಅವಧಿಯಲ್ಲಿ ಹಿಂಸೆ ಮತ್ತು ಹತ್ಯೆಗಳಿಗೆ ಬಲಿಯಾದ ಕೊಡವ ಹುತಾತ್ಮರನ್ನು ಸ್ಮರಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಕೋಟೆಯು ಕೊಡವ ಸಮುದಾಯದ ಇತಿಹಾಸದಲ್ಲಿ ನಡೆದ ರಾಜಕೀಯ ಹಿಂಸೆ, ದ್ರೋಹ ಮತ್ತು ದಬ್ಬಾಳಿಕೆಯ ನೆನಪುಗಳನ್ನು ಉಳಿಸಿಕೊಂಡಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.

ಕೊಡವ ಸಮುದಾಯಕ್ಕೆ ವಿಶ್ವಸಂಸ್ಥೆಯ ಮೂಲನಿವಾಸಿ ಜನಾಂಗದ ಮಾನ್ಯತೆ, ಯುನೆಸ್ಕೋ ಮಾನ್ಯತೆ ಹಾಗೂ ಭಾರತದ ಸಂವಿಧಾನದ ಚೌಕಟ್ಟಿನೊಳಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ದೊರೆಯಬೇಕೆಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.

ಏವಕಪಾಡಿ, ಪಾಡಿನಾಡಿನ ನಾಲ್ನಾಡ್ ಅರಮನೆಯಲ್ಲಿ ಹಿಂದಿನ ಅರಸರ ಆಡಳಿತದ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಬಲಿಯಾದ ಕೊಡವ ಸಂತ್ರಸ್ತರನ್ನು ಸಿಎನ್‌ಸಿ ಕಾರ್ಯಕರ್ತರು ಪುಷ್ಪಾರ್ಚನೆ ಮತ್ತು ತರ್ಪಣದ ಮೂಲಕ ಸ್ಮರಿಸಿದರು.

2026-27ನೇ ಸಾಲಿನ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವ ಸಮುದಾಯದ ಪ್ರತ್ಯೇಕ ಸಾಂವಿಧಾನಿಕ ಗುರುತನ್ನು ಸಂರಕ್ಷಿಸಲು ಪ್ರತ್ಯೇಕ ಕೋಡ್ ಮತ್ತು ಕಾಲಮ್ ಒದಗಿಸಬೇಕೆಂದು ಸಿಎನ್‌ಸಿ ತನ್ನ ಆಗ್ರಹವನ್ನು ಪುನರುಚ್ಚರಿಸಿದೆ. ಕೊಡವರ ಸಾಂಸ್ಕೃತಿಕ ಗುರುತು, ಪರಂಪರೆ ಮತ್ತು ಹಕ್ಕುಗಳ ಸಂರಕ್ಷಣೆಗೆ ನ್ಯಾಯಸಮ್ಮತ ಮಾನ್ಯತೆ ಅಗತ್ಯವೆಂದು ಎನ್ .ಯು.ನಾಚಪ್ಪ ತಿಳಿಸಿದರು.

ತೆನ್ನಿರ ಮೈನ, ಅರೆಯಡ ಗಿರೀಶ್ ತಿಮ್ಮಯ್ಯ, ಅಪ್ಪಾರಂಡ ವಿಜು, ಅಪ್ಪಾರಂಡ ಪ್ರಸಾದ್ ಕುಶಾಲಪ್ಪ, ಪಾಲೆಕಂಡ ಪ್ರಧಾನ್ ಪೂಣಚ್ಚ, ಐತ್ತಿಚಂಡ ಪೂವಣ್ಣ, ಅಪ್ಪಾರಂಡ ಪ್ರಕಾಶ್ ಅಪ್ಪಣ್ಣ ಹಾಗೂ ಅಪ್ಪಾರಂಡ ರಿಷಿಕ್ ನಾಣಯ್ಯ ಭಾಗವಹಿಸಿದ್ದರು.