ಕನ್ನಡಪ್ರಭ ವಾರ್ತೆ ಹೊಸದುರ್ಗ

ಭಗವಂತನ ನಾಮಸ್ಮರಣೆಯ ಸೇವೆ ಸಜ್ಜನರ ಸಹವಾಸ ಆಗಬೇಕು ಎಂದು ಬೆಲಗೂರು ಮಾರುತಿ ಗುರುಪೀಠದ ವಿಜಯ ಮಾರುತಿ ಶರ್ಮ ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಅಯೋಧ್ಯೆ ರಾಮನಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಮುತ್ತಂಗಿ ಸಮರ್ಪಣಾ ಕಾರ್ಯಕ್ರಮದಲ್ಲಿ ಮುತ್ತಿನ ಕವಚ ಅನಾವರಣಗೊಳಿಸಿ ಮಾತನಾಡಿ, ವಸ್ತು ಯಥೇಚ್ಛವಾಗಿ ಸಿಕ್ಕಿದಾಗ ಅದರ ಬೆಲೆ ಗೊತ್ತಾಗುವುದಿಲ್ಲ. ಮಾಯೆ ಎನ್ನುವುದು ಸೀತಾಮಾತೆಗೂ ತಪ್ಪಲಿಲ್ಲ. ಸಾಮಾನ್ಯ ಮನುಷ್ಯರಾದ ನಮಗೆ ತಟ್ಟದೇ ಬಿಡುತ್ತದೆಯೇ ಎಂದರು .

ಹೊಸದುರ್ಗದ ಭಕ್ತರು ರಾಮ ಮಂದಿರದಲ್ಲಿ ಸ್ಥಾಪನೆಯಾದ ಬಾಲ ರಾಮನಿಗೆ ಮುತ್ತಿನ ಕವಚ ಸಮರ್ಪಣೆ ಮಾಡಲು ಮುಂದಾಗಿದ್ದಾರೆ. ನಮ್ಮ ಜೀವನ ಸಾರ್ಥಕ ಮಾಡಿಕೊಳ್ಳಲು, ಪುಣ್ಯ ಸಂಪಾದಿಸಲು ಇಂತಹ ಸತ್ಕಾರ್ಯ ಮಾಡಬೇಕು. ಮುತ್ತಂಗಿಯನ್ನು ವಿನ್ಯಾಸ ಮಾಡಿದವರಿಗೆ ಶ್ರೇಯಸ್ಸು ಸಿಗಲಿ ಎಂದರು.

ಬೆಲಗೂರು ಸುದರ್ಶನ್ ಮಾತನಾಡಿ, ಜಯಶ್ರೀ ಅವರು ಅಯೋಧ್ಯೆರಾಮನ ಶ್ವೇತ ವಸ್ತ್ರ ತೆಗೆದುಕೊಂಡು ಬಂದು ವಿನ್ಯಾಸ ಮಾಡಿದ್ದಾರೆ. ರಾಷ್ಟ್ರಪತಿಗಳು ಬಂದ ದಿನ ಸಮರ್ಪಣೆ ಆಗಬೇಕಿತ್ತು. ಆದರೆ ಕಾರಣಗಳಿಂದ ತಡವಾಗಿದೆ. ವಿಶ್ವ ಹಿಂದೂ ಪರಿಷತ್‌ನ ಗೋಪಾಲ ಅವರು ಇದಕ್ಕೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.


ಈ ವೇಳೆ ವಾಸವಿ ಬಳಗದ ಮುಖಂಡರು ಮತ್ತು ಶ್ರೀರಾಮ ಭಕ್ತರು ಪಾಲ್ಗೊಂಡಿದ್ದರು.