ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ: ಎಡಿಸಿ ಅಶೋಕ

| Published : Mar 22 2024, 01:03 AM IST

ಸಾರಾಂಶ

ಲೋಕಸಭೆ ಚುನಾವಣೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೂಚನೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಲಯ ಮಟ್ಟದ ಅಧಿಕಾರಿಗಳು ಹಾಗೂ ತರಬೇತುದಾರರಿಗಾಗಿ ಚುನಾವಣಾ ತರಬೇತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಲೋಕಸಭೆ ಚುನಾವಣೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆಗೆ ನಿಯೋಜಿಸಿರುವ ಅಧಿಕಾರಿಗಳು ತಮಗೆ ನೀಡಲಾದ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಲಯ ಮಟ್ಟದ ಅಧಿಕಾರಿಗಳು ಹಾಗೂ ತರಬೇತುದಾರರಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ಹಿನ್ನೆಲೆ ಜಿಲ್ಲೆಯಲ್ಲಿ ಈಗಾಗಲೇ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ಹಾಗೂ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಿ ಕೆಲಸ ಮಾಡಬೇಕು. ಚುನಾವಣೆ ನಡೆಸಲು ಜಿಲ್ಲಾಡಳಿತದ ವತಿಯಿಂದ ಎಲ್ಲಾ ರೀತಿಯಲ್ಲೂ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ನಿಯಮಾನುಸಾರವಾಗಿ ಮತ್ತು ಪಾರದರ್ಶಕವಾಗಿ ಮತದಾನ ನಡೆಯಲು ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿರುತ್ತದೆ. ಆದ್ದರಿಂದ ಅಧಿಕಾರಿಗಳು ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಮತದಾನ ಪ್ರಕ್ರಿಯೆ ಬಗ್ಗೆ ರಾಷ್ಟ್ರೀಯ ತರಬೇತಿದಾರರು ತಿಳಿಸಿಕೊಡುವ ನಿಯಮಗಳು ಹಾಗೂ ಸಲಹೆಗಳನ್ನು ಪಾಲಿಸುತ್ತಾ ಚುನಾವಣೆ ಪ್ರಕ್ರಯೆಯ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ ತರಬೇತುದಾರರಿಂದ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ, ಜಿಪಂ ಉಪಕಾರ್ಯದರ್ಶಿ ಬಸರಿಗಿಡದ, ತಹಸೀಲ್ದಾರ್‌ ಸುರೇಶ ವರ್ಮಾ, ರಾಷ್ಟ್ರೀಯ ಚುನಾವಣಾ ತರಬೇತುದಾರ ಎನ್.ವಿ ಸಿರಿಗಾಂವಕರ್, ಡಯಟ್ ಪ್ರಾಚಾರ್ಯ ಶ್ರೀನಿವಾಸ ರೆಡ್ಡಿ, ಜಿಲ್ಲಾ ಚುನಾವಣೆ ತರಬೇತಿದಾರ ಸದಾಶಿವಪ್ಪ ಸೇರಿದಂತೆ ಜಿಲ್ಲೆಯ ವಲಯ ಮಟ್ಟದ ಅಧಿಕಾರಿಗಳು, ತರಬೇತಿದಾರರು ಇದ್ದರು.