ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆ ಅಧಿಕಾರಿಗಳು ಸಭೆಗೆ ಸಮಯಕ್ಕೆ ಸರಿಯಾಗಿ ಬರಬೇಕು. ಇದು ಕಾಟಾ ಚಾರದ ಸಭೆಯಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಂಗಳವಾರ ತಾ.ಪಂ. ಸಾಮರ್ಥ್ಯಸೌಧದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 11.30 ಆದರೂ ಸಭೆಗೆ ಅಧಿಕಾರಿಗಳು ಬಾರದೇ ಇರುವುದರಿಂದ ಹಾಗೂ ಇಲಾಖೆಗಳ ಪ್ರಗತಿ ವರದಿ ನೇರವಾಗಿ ಸಭೆಗೇ ತಂದು ಕೊಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಸಭೆಯಲ್ಲಿ ಅಧಿಕಾರಿಗಳು ನೀಡುವ ಮಾಹಿತಿಯನ್ನೇ ನಾವು ಫಲಾನುಭವಿಗಳಿಗೆ ಹೇಳಬೇಕಾಗುತ್ತದೆ. ನೀವೇ ಸಭೆಗೆ ತಡವಾಗಿ ಬರುವುದು, ಪ್ರಗತಿ ವರದಿಗಳನ್ನು ಮುಂಚಿತವಾಗಿ ಸಲ್ಲಿಸದೇ ಇರುವುದು ಸರಿಯಲ್ಲ. ನಿಮಗೆ ನಾವು ಕಾಯಬೇಕೋ ಅಥವಾ ನಮಗೆ ನೀವು ಕಾಯಬೇಕೋ ಎಂದು ತರಾಟೆಗೆ ತೆಗೆದುಕೊಂಡರು.ಆಹಾರ ಇಲಾಖೆ ಅಧಿಕಾರಿ ಗಣಪತಿ ಮಾತನಾಡಿ, ಕಾರ್ಡುಗಳ ತಿದ್ದುಪಡಿ, ಸೇರ್ಪಡೆ, ವಿಳಾಸ ಬದಲಾವಣೆಗೆ ಇದ್ದ ಕಾಲಾವಕಾಶ ಮುಗಿದಿದೆ. ಇನ್ನು ಯಾವುದೇ ರೀತಿ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಮೇ ಮಾಹೆಗೆ ಅಂತ್ಯೋದಯ ಕಾರ್ಡುದಾರರಿಗೆ ಕೇಂದ್ರದಿಂದ 734.30 ಕ್ವಿಂಟಾಲ್ , ಅನ್ನ ಭಾಗ್ಯಕ್ಕಾಗಿ ರಾಜ್ಯದಿಂದ 199.95 ಒಟ್ಟು 934.25 ಕ್ವಿಂಟಾಲ್ ಅಕ್ಕಿ ಬಂದಿದೆ. ಬಿಪಿಎಲ್ ಕಾರ್ಡುದಾರರಿಗೆ ಅನ್ನ ಭಾಗ್ಯ ಯೋಜನೆಯಡಿ ಕೇಂದ್ರದಿಂದ 2106.05 ಕ್ವಿಂಟಾಲ್ , ರಾಜ್ಯದಿಂದ 1941.70 ಕ್ವಿಂಟಾಲ್ ಅಕ್ಕಿ ಸೇರಿ ಒಟ್ಟು 4982.00 ಕ್ವಿಂಟಾಲ್ ಅಕ್ಕಿ ಹಂಚಿಕೆಯಾಗಿದೆ ಎಂದು ಮಾಹಿತಿ ನೀಡಿದರು. ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ ಡಿಪೋ ಅಧಿಕಾರಿ ಸುರೇಶ್‌ನಾಯ್ಕ್ ಮಾತನಾಡಿ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಚಿಕ್ಕಮಗಳೂರು ತಾಲೂಕಿನಲ್ಲಿ 2025-26 ಮಾರ್ಚ್ ಅಂತ್ಯದವರೆಗೆ ಒಟ್ಟು 1,16,71,753 ಮಹಿಳೆಯರು ಪ್ರಯಾಣಿಸಿದ್ದು ಇಲಾಖೆಗೆ ₹.43,85,15,475 ಆದಾಯ ಬಂದಿದೆ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರು ಡಿಪೋದಿಂದ ಕೇವಲ ಒಂದು ಬಸ್ ಮಾತ್ರ ಸಂಚರಿಸುತ್ತದೆ. ಶಿವಮೊಗ್ಗ ಡಿಪೋದಿಂದ ಆರೇಳು ಬಸ್ಸುಗಳು ಸಂಚರಿಸುತ್ತವೆ. ಸಂಬಂಧಪಟ್ಟ ವರದಿಯನ್ನು ಶಿವಮೊಗ್ಗ ಡಿಪೋದವರು ನೀಡಬೇಕೆಂದರು. ಸಮಿತಿ ಸದಸ್ಯ ಇಂದಿರಾನಗರ ರಘು ಮಾತನಾಡಿ, ಶಿವಮೊಗ್ಗ ಡಿಪೋ ಅಧಿಕಾರಿಗಳಿಗೆ ಈ ಹಿಂದಿನ ಸಭೆಗೂ ಆಗಮಿಸುವಂತೆ ಸೂಚನಾ ಪತ್ರ ನೀಡಲಾಗಿದೆ. ಇಂದಿನ ಸಭೆಗೂ ನೀಡಲಾಗಿದೆ. ಆದರೂ ಬಂದಿಲ್ಲ. ಅಲ್ಲಿನ ಅಧಿಕಾರಿಗಳಿಂದ ಹೇಗೆ ಮಾಹಿತಿ ಪಡೆಯ ಬೇಕು. ಶಿವಮೊಗ್ಗ ಡಿಪೋ ಅಧಿಕಾರಿಗಳು ಸರಿಯಾಗಿ ಸ್ಪಂಧಿಸುವುದಿಲ್ಲ, ಉದ್ಧಟನದಿಂದ ವರ್ತಿಸುತ್ತಾರೆ. ನಾವು ನೀಡಿದ ಯಾವುದೇ ದೂರಿಗೂ ಕ್ರಮವಾಗಿಲ್ಲ ಎಂದು ದೂರಿದರು. ಅಧ್ಯಕ್ಷೆ ಚಂದ್ರಮ್ಮ ಮಾತನಾಡಿ, ಶಿವಮೊಗ್ಗ ಡಿಪೋ ಅಧಿಕಾರಿಗಳ ಈ ವರ್ತನೆ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು. ಅಲ್ಲದೆ ಜಿಲ್ಲಾ ಮಟ್ಟದ ಸಭೆಯಲ್ಲೂ ಗಂಭೀರವಾಗಿ ಚರ್ಚಿಸಲಾಗುವುದೆಂದರು. ಸಭೆಯಲ್ಲಿ ಸದಸ್ಯರಾದ ಇಂದಿರಾ ನಗರ ರಘು, ನರೇಗ ಸಹಾಯಕ ನಿರ್ದೇಶಕ ಮನೀಶ ನಿತ್ಯಾನಂದ,ನಾಗರಾಜ್,ಜಯರಾಂ,ಬೇಸಿಲ್,ಹೂವಮ್ಮ, ದೇವರಾಜ್, ಸೈಯದ್‌ಶಫೀರ್‌ಅಹಮ್ಮದ್ ಇದ್ದರು.