ಸಾರಾಂಶ
ತಾಲೂಕು ಪಂಚಾಯಿತಿ ಪೂರ್ವ ಭಾವಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸಂವಿಧಾನ ಜಾಗೃತಿ ಜಾಥಾ ನಮ್ಮ ತಾಲೂಕಿಗೆ ಆಗಮಿಸುತ್ತಿದ್ದು ಈ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳೂ ಕಡ್ಡಾಯವಾಗಿ ಭಾಗವಹಿಸಬೇಕೆಂದು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಸೂಚಿಸಿದರು.
ಸೋಮವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ತಹಸೀಲ್ದಾರ್ ಹಾಗೂ ತಾಪಂ ಇಒ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸರ್ಕಾರ ಈ ಜಾಗೃತಿ ಜಾಥಾವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳು ದಂಡ ತೆರಬೇಕಾಗುತ್ತದೆ. ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿಯೇ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸೋಣ. ವಿಧ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಕ್ರಮ ವಹಿಸಬೇಕು. ಜಾಗೃತಿ ಜಾಥಾ ಫೆಬ್ರವರಿ 8 ರಂದು ಪ್ರವಾಸಿ ಮಂದಿರದಲ್ಲಿ ತಂಗಲು ವ್ಯವಸ್ಥೆ ಮಾಡಬೇಕೆಂದರು.ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಎಲ್ಲಾ ಗ್ರಾಪಂಗಳಲ್ಲೂ ಕೂಡ ವ್ಯಾಪಕ ಪ್ರಚಾರ ಮಾಡಬೇಕು. ಗ್ರಾಪಂ ವ್ಯಾಪ್ತಿ ಕಾಲೇಜಿನ ಪ್ರಾಂಶುಪಾಲರು, ಶಾಲೆ ಮುಖ್ಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯ ಕರ್ತೆಯರೊಂದಿಗೆ ಚರ್ಚಿಸಿ, ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಹಾಗೂ ಕಾರ್ಯ ಕ್ರಮದ ರೂಪು ರೇಷೆಗಳ ಬಗ್ಗೆ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿ ಕಾರ್ಯಕ್ರಮದ ರೂಪುರೇಷೆ ಸಿದ್ಧ ಪಡಿಸಿರಿ ಎಂದು ತಾಲೂಕಿನ ಎಲ್ಲಾ ಗ್ರಾಪಂ ಪಿಡಿಓಗಳಿಗೆ ಸೂಚಿಸಿದರು.
ತಹಸೀಲ್ದಾರ್ ತನುಜ.ಟಿ.ಸವದತ್ತಿ ಮಾತನಾಡಿ, ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಉತ್ತಮವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಇಲಾಖಾಧಿಕಾರಿಗಳೂ ಕೂಡ ಸಹಕಾರ ನೀಡಬೇಕು. ನಮ್ಮ ತಾಲ್ಲೂಕಿನ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.ಸಿಡಿಪಿಓ ವೀರಭದ್ರಯ್ಯ ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಲಾಗಿದೆ. ನಮ್ಮ ತಾಲೂಕಿನಲ್ಲಿ ಮೊದಲು ಮಾಗುಂಡಿ ಗ್ರಾಪಂಗೆ ಜಾಗೃತಿ ಜಾಥಾ ಆಗಮಿಸಲಿದ್ದು ಫೆ.8 ರಂದು ಪಟ್ಟಣದಲ್ಲಿ ವಾಸ್ತವ್ಯ ಹೂಡಲಿದೆ. ಫೆ.9 ರಂದು ಮೆಣಸೂರು, ಕಡಹಿನಬೈಲು ಹಾಗೂ ಮುತ್ತಿಕೊಪ್ಪ ಮಾರ್ಗವಾಗಿ ಲಕ್ಕವಳ್ಳಿಗೆ ಜಾಗೃತಿ ಜಾಥಾ ತೆರಳಲಿದೆ ಎಂದರು. ಎಪಿಎಂಸಿ ನಿರ್ದೇಶಕ ಶಿವಣ್ಣ, ಶೆಟ್ಟಿಕೊಪ್ಪ ಮಹೇಶ್ ಮಾತನಾಡಿದರು.