ಗೋ ಉತ್ಪನ್ನ ಖರೀದಿಸುವ ಮನೋಭಾವ ಬೆಳೆಯಬೇಕು

| Published : Jan 30 2024, 02:02 AM IST

ಸಾರಾಂಶ

ಗೋವಿನ ಉತ್ಪನ್ನಗಳನ್ನು ಪರಿಚಯಿಸುವ ಕೆಲಸದ ಜೊತೆಗೆ ಜನರು ಗೋ ಉತ್ಪನ್ನಗಳ ಖರೀದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಲೆನಾಡು ಗಿಡ ತಳಿ ಸಂವರ್ಧನೆ ಮತ್ತು ಸಂರಕ್ಷಣೆಗೆ ಅಗತ್ಯಕ್ರಮ ಕೈಗೊಳ್ಳಬೇಕು. ಮಠಗಳು ಗೋವು ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿವೆ. ರಾಮಚಂದ್ರಪುರ ಮಠದ ಶ್ರೀಗಳು ಮಲೆನಾಡುಗಿಡ್ಡ ತಳಿ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದ್ದರು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ಸಾಗರ

ಗೋವಿನ ಉತ್ಪನ್ನಗಳನ್ನು ಪರಿಚಯಿಸುವ ಕೆಲಸದ ಜೊತೆಗೆ ಜನರು ಗೋ ಉತ್ಪನ್ನಗಳ ಖರೀದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಪಟ್ಟಣದ ಜೋಸೆಫ್‌ ನಗರದಲ್ಲಿ ಭಾನುವಾರ ಮಲೆನಾಡು ಗಿಡ್ಡ ರೈತ ಉತ್ಪಾದಕರ ಕಂಪನಿ ಮತ್ತು ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮಲೆನಾಡು ಗಿಡ ತಳಿ ಸಂವರ್ಧನೆ ಮತ್ತು ಸಂರಕ್ಷಣೆಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದರು.

ಮಠಗಳು ಗೋವು ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿವೆ. ರಾಮಚಂದ್ರಪುರ ಮಠದ ಶ್ರೀಗಳು ಮಲೆನಾಡುಗಿಡ್ಡ ತಳಿ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದ್ದರು. ಸಾಗರದಲ್ಲಿ ಮಲೆನಾಡು ಗಿಡ್ಡ ತಳಿ ಸಂರಕ್ಷಣೆಗೆ ಸಂಬಂಧಪಟ್ಟಂತೆ ಕಾರ್ಯಯೋಜನೆ ರೂಪಿಸಿರುವುದು ಸ್ವಾಗತಾರ್ಹ ಸಂಗತಿ. ಮಲೆನಾಡು ಗಿಡ್ಡ ತಳಿ ಸಂರಕ್ಷಣೆಗೆ ಬೇಕಾದ ಎಲ್ಲ ಸಹಕಾರವನ್ನು ವೈಯಕ್ತಿಕವಾಗಿ ಹಾಗೂ ಸರ್ಕಾರದ ಕಡೆಯಿಂದ ಕೊಡಿಸುವ ಭರವಸೆ ನೀಡಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಮಲೆನಾಡು ಗಿಡ್ಡ ತಳಿ ಅತ್ಯಂತ ಶ್ರೇಷ್ಠವಾದ ಗೋತಳಿಯಾಗಿದೆ. ನಾವೆಲ್ಲಾ ಚಿಕ್ಕವರಿದ್ದಾಗ ಮಲೆನಾಡು ಗಿಡ್ಡ ತಳಿಯ ಹಾಲು, ಮೊಸರು ಕುಡಿದು ಬೆಳೆದಿದ್ದೇವೆ. ಈಗಿನ ಯುವಕರಿಗೆ ಮಲೆನಾಡು ಗಿಡ್ಡತಳಿ ಎಂದರೆ ಗೊತ್ತಿಲ್ಲ. ಬದಲಾದ ಕಾಲದಲ್ಲಿ ಗೋವು ಸಾಕಾಣಿಕೆ ಬಗ್ಗೆ ಗ್ರಾಮಾಂತರ ಪ್ರದೇಶದ ಜನರು ಸಹ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಗೋವು ಸಾಕಾಣಿಕೆ ಬಗ್ಗೆ ಆಸಕ್ತಿ ಮೂಡಿಸುವ ಜೊತೆಗೆ ಮಲೆನಾಡು ಗಿಡ್ಡತಳಿ ಸಂರಕ್ಷಣೆಗೆ ಒತ್ತು ನೀಡಲು ಇಂತಹ ಸಂಸ್ಥೆಗಳ ಅಗತ್ಯವಿದೆ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷ ನಾಗೇಂದ್ರ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ರವಿ ಉಡುಪ, ಡಾ.ಶಿವಯೋಗಿ, ಡಾ.ಉಮಾದೇವಿ, ಬದರೀಶ್ ಇನ್ನಿತರರು ಹಾಜರಿದ್ದರು. ಬಂದಗದ್ದೆ ರಾಧಾಕೃಷ್ಣ ಸ್ವಾಗತಿಸಿದರು. ಶ್ರಾವ್ಯ ಸಾಗರ್ ಮತ್ತು ಚಂದನಾ ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಭಟ್ ವಂದಿಸಿದರು.

- - -

-29ಕೆ.ಎಸ್.ಎ.ಜಿ.2:

ಸಾಗರ ಪಟ್ಟಣದ ಜೋಸೆಫ್‌ ನಗರದಲ್ಲಿ ಮಲೆನಾಡು ಗಿಡ್ಡ ರೈತ ಉತ್ಪಾದಕರ ಕಂಪನಿ ಮತ್ತು ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ನೂತನ ಕಚೇರಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.