ಸಾರಾಂಶ
ಸಂವಿಧಾನಕ್ಕೂ ಬಸವಣ್ಣನ ವಚನಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು ಚಿಂತಕ ಸಿ.ಎಸ್.ದ್ವಾರಕನಾಥ್ ಹೇಳಿದರು.
ಚಿತ್ರದುರ್ಗ: ಸಂವಿಧಾನಕ್ಕೂ ಬಸವಣ್ಣನ ವಚನಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು ಚಿಂತಕ ಸಿ.ಎಸ್.ದ್ವಾರಕನಾಥ್ ಹೇಳಿದರು.
ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಎಸ್‌ಜೆಎಸ್ ಜ್ಞಾನ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧನ ಮಾನವೀಯತೆ ಬಸವ, ಅಂಬೇಡ್ಕರ್ ಅವರ ಸಮಾನತೆಯಿಂದಾಗಿ ನಾವು ಇಲ್ಲಿ ನೆಮ್ಮದಿ ಬದುಕು ಕಟ್ಟಿಕೊಂಡಿದ್ದೇವೆ ಎಂದರು.ಸಮಾನತೆ, ಸಹೋದರರಂತೆ, ಸಹಬಾಳ್ವೆಯ ದಾಖಲೆಗಳನ್ನು ಮ್ಯಾಗ್ನಾಕಾಟ್‍ನಿಂದ ನೋಡುತ್ತೇವೆ. ಅದಕ್ಕಿಂತ ಮುಂಚೆಯೇ ಬಸವಾದಿ ಶರಣರು ನಮ್ಮಲ್ಲಿ ಇವುಗಳ ಪ್ರತಿಪಾದಿಸಿದ್ದಾರೆ. ಅದನ್ನು ಯಾರು ಮರೆಯಲಿಕ್ಕೆ ಆಗುವುದಿಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ಮೊಟ್ಟ ಮೊದಲು ಧ್ವನಿ ಎತ್ತಿದ ಬಸವಾದಿ ಶರಣರ ಆದಿಯಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಸ್ವಾತಂತ್ರ್ಯ ಬಂದ ನಂತರ ಸಿಕ್ಕಿದ್ದು ಸಂವಿಧಾನ. ಸಂವಿಧಾನದ ಪ್ರತಿ ಅನುಚ್ಛೇದಕ್ಕೂ ಬಸವಾದಿ ಶರಣರ ಅನೇಕ ವಚನಗಳನ್ನು ಅಡಿ ಟಿಪ್ಪಣಿಗಳಾಗಿ ಕೊಡಬಹುದು. ನಾವೆಲ್ಲ ಇಂದು ಇಲ್ಲಿ ಕುಳಿತಿದ್ದೇವೆ ಎಂದರೆ ಸಂವಿಧಾನ ಕೊಟ್ಟ ರಕ್ಷಣೆಯಾಗಿದೆ. ನಾವುಗಳೆಲ್ಲ ಓದುತ್ತಿದ್ದೇವೆ, ಬರೆಯುತ್ತಿದ್ದೇವೆ, ಮುಕ್ತವಾಗಿ ಎಲ್ಲವನ್ನು ಹಂಚಿಕೊಳ್ಳುತ್ತಿದ್ದೇವೆ ಎನ್ನುವ ವಾಸ್ತವಕ್ಕೆ ಸಂವಿಧಾನದ ಕೊಡುಗೆ ಇದೆ. ಬುದ್ಧ, ಬಸವ, ಅಂಬೇಡ್ಕರ್ ಮೌಲ್ಯಗಳನ್ನ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಪ್ರಜೆಗಳಾಗಲು ಸಾಧ್ಯವೆಂದರು.ಬಸವ ಪರಂಪರೆಯಲ್ಲಿ ಅನ್ನದಾಸೋಹ, ಅಕ್ಷರ ದಾಸೋಹ ಬಂದಿದೆ. ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ನಾನು ಕೋಲಾರ ಜಿಲ್ಲೆಯಿಂದ ಬಂದವನು. ಮಠ ಪರಂಪರೆ ಅಲ್ಲಿಲ್ಲ. ಎಲ್ಲೋ ಶಾಲೆ ಸೇರಿ ಮತ್ತೆಲ್ಲೋ ಓದಿದೆವು. ಈ ಭಾಗಕ್ಕೆ ಬಂದ ಮೇಲೆ ಬಸವಾದಿ ಶರಣರ ದಾಸೋಹ ಕಲ್ಪನೆ ಅರ್ಥವಾಯಿತು ಎಂದು ದ್ವಾರಕಾನಾಥ್ ಹೇಳಿದರು.
ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮು, ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ, ಎಸ್.ಜೆಎಸ್ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ.ಮೋಹನ್, ನಿರ್ದೇಶಕ ನೇರಲಗುಂಟೆ ರಾಮಪ್ಪ, ಕಾಳಘಟ್ಟ ಹನುಮಂತಪ್ಪ, ಕೆ.ರುದ್ರಪ್ಪ, ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ಆಂಜನೇಯ, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.