ಸಾರಾಂಶ
ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ
ಪಟ್ಟಣದ ಭಗತ್‌ಸಿಂಗ್ ವೃತ್ತದಲ್ಲಿ ಶಿವಮೊಗ್ಗ, ಶಿಕಾರಿಪುರ, ರಾಣಿಬೆನ್ನೂರ ರೈಲ್ವೆ ಯೋಜನೆಯ ಅವೈಜ್ಞಾನಿಕ ಭೂಸ್ವಾಧೀನ ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಪೊಲೀಸ್ ಇಲಾಖೆ ಮುಂದಿಟ್ಟುಕೊಂಡು ಭೂಮಿ ಕಬಳಿಸುವ ಉದ್ಧಟನದ ತೀರ್ಮಾನಕ್ಕೆ ರೈಲ್ವೆ ಇಲಾಖೆ ಮುಂದಾದರೆ, ಅದರಿಂದಾಗುವ ಪರಿಣಾಮವನ್ನು ಅಧಿಕಾರಿಗಳೇ ಅನುಭವಿಸಬೇಕು. ನನ್ನ ಭೂಮಿ ನನ್ನ ಹಕ್ಕು, ಭೂಮಿಗಾಗಿ ಪ್ರಾಣ ಕಳೆದುಕೊಳ್ಳಲು ನಾವು ಸಿದ್ಧ ಎಂದರು.
ಈ ಹಿಂದೆ ತುಂಗಾ ಮೇಲ್ದಂಡೆ ಕಾಲುವೆಗೆ ರಟ್ಟೀಹಳ್ಳಿ ತಾಲೂಕಿನಲ್ಲಿ ೧೧೫೦ ಎಕರೆ ಭೂಮಿ ಕಳೆದುಕೊಂಡು ಇದುವರೆಗೂ ಪರಿಹಾರದ ಹಣ ಸಿಗದೆ ಕಂಗಾಲಾಗಿದ್ದೇವೆ. ಮತ್ತೆ ಈಗ ನೂರಾರು ಎಕರೆ ಫಲವತ್ತಾದ ಭೂಮಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪಟ್ಟಣದಲ್ಲಿ ಹಾದು ಹೋಗುವ ರೈಲ್ವೆ ಮಾರ್ಗ ಬದಲಿಸಿ ೧೦೦ಮೀ ಮುಂದಕ್ಕೆ ಹಾಕಬೇಕು ಎಂದು ಮನವಿ ಮಾಡಿದರು.ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ರೈಲ್ವೆ ಇಲಾಖೆಗೆ ಭೂಮಿ ಕೊಡಲು ಸಿದ್ಧ. ಆದರೆ ಪಟ್ಟಣದ ಮಧ್ಯ ಭಾಗದಲ್ಲಿ ಜಾಗ ಕೊಡುವುದಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಮಾರ್ಗದ ಖಚಿತ ಮಾಹಿತಿ ನೀಡಬೇಕು. ಅಲ್ಲದೆ ಭೂ ಸ್ವಾಧೀನಕ್ಕೆ ಮುನ್ನ ಪ್ರತಿ ಎಕರೆಗೆ ₹೨೫-೩೦ ಲಕ್ಷ ಪರಿಹಾರ ನೀಡಬೇಕು ಎಂದರು.
ಸ್ಥಳಕ್ಕಾಗಮಿಸಿದ ಜಿಲ್ಲಾ ಉಪ ವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ಮನವಿ ಸ್ವೀಕರಿಸಿ, ಪಟ್ಟಣದ ಒಳ ಭಾಗದಲ್ಲಿ ರೈಲ್ವೆ ಮಾರ್ಗ ಹೋದರೆ ನೂರಾರು ಮನೆ, ಪ್ಲಾಟ್‌ಗೆ ತೊಂದರೆಯಾಗಲಿದೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ತಹಸೀಲ್ದಾರರ ಸಮ್ಮುಖದಲ್ಲಿ ಮತ್ತೊಮ್ಮೆ ಸಂಪೂರ್ಣವಾಗಿ ಸ್ಥಳ ಪರಿಸೀಲಿಸಿ ಪ್ರಸ್ತುತ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಹಿಂದೆ ನಿಗದಿ ಪಡಿಸಿದ ಸ್ಥಳದಲ್ಲಿ ರೈಲ್ವೆ ಯೋಜನೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈ ಬಿಟ್ಟರು.ಮುಖಂಡರಾದ ಶಂಕರಗೌಡ ಚನ್ನಗೌಡ್ರ, ಶಂಕರಗೌಡ ಶಿರಗಂಬಿ, ಗುಡ್ಡನಗೌಡ ಪ್ಯಾಟಿಗೌಡ್ರ, ಬಸನಗೌಡ ಗಂಟೆಪ್ಪಗೌಡ್ರ, ನಾಗನಗೌಡ ಕೊನ್ತಿ, ಪ್ರಭು ಮುದಿವೀರಣ್ಣನವರ, ಶೇಖರಗೌಡ ಏಕ್ಕೆಗುಂದಿ, ರವಿ ಹದಡೇರ, ರಾಜು ಮಳಗೊಂಡರ, ಶಣ್ಮುಖ ಪ್ಯಾಟಿಗೌಡ್ರ, ರಾಕೇಶ ಚೂರಿ, ಉಜ್ಜಪ್ಪ ಮಳಗೊಂಡರ ಹಾಗೂ ಸುತ್ತಮುತ್ತಲಿನ ನೂರಾರು ರೈತರಿದ್ದರು.