ಸಾರಾಂಶ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಬೆಳೆದ ಭಾರೀ ಬೇಡಿಕೆಯ ಮಿಯಾ ಜಾಕಿ ಮಾವಿನ ತಳಿಯ ಬೆಳೆಯನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳು ವೀಕ್ಷಣೆ ಮಾಡಿದರು.ಈಗ ರೈತರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಜಿಗೆ ಲಕ್ಷ ರೂಪಾಯಿಗೆ ಮಾರಾಟವಾಗುವ, ಅತ್ಯಂತ ದುಬಾರಿ ಮಾವು ಬೆಳೆಯಲು ರೈತರು ಮುಂದಾಗಿದ್ದಾರೆ. ಜಪಾನ್ ಮೂಲದ ಮಿಯಾ ಜಾಕಿ ಮಾವು ರೈತರಲ್ಲಿ ಹೊಸ ಆಶಾ ಭಾವನೆ ಮೂಡಿಸಿದ್ದು, ತಾಲೂಕಿನ ತರಲಕಟ್ಟಿ ಗ್ರಾಮದ ರೈತ ಬಸವರಾಜ ವಲ್ಮಕೊಂಡಿ ಮೀಯಾ ಜಾಕಿ ಮಾವುಗಳನ್ನು ಬೆಳೆಯಲು 3 ಎಕರೆ ಜಮೀನಿನಲ್ಲಿ ೬೦೦ ಸಸಿ ನೆಟ್ಟಿದ್ದಾರೆ.ಮೀಯಾ ಜಾಕಿ ನನಗೆ ಪರಿಚಯವಾಗಿದ್ದು, ಕಳೆದ ವರ್ಷ ಕೊಪ್ಪಳ ನಗರದ ಮಾವು ಮೇಳದಲ್ಲಿ. ಈ ಮಾವಿನ ಬಗ್ಗೆ ಸವಿಸ್ತಾರವಾಗಿ ಅಧಿಕಾರಿಗಳು ತಿಳಿಸಿಕೊಟ್ಟಿದ್ದರು. ಮೀಯಾ ಜಾಕಿ ಸಸಿಗಳನ್ನು ನಾಟಿ ಮಾಡಲೇಬೇಕು ಎಂಬ ಛಲದಿಂದ ಶ್ರೀಲಂಕಾ ಹಾಗೂ ಮಧ್ಯಪ್ರದೇಶಕ್ಕೆ ತೆರಳಿ ₹೨೫೦೦ಗೆ ಒಂದು ಸಸಿಯಂತೆ ಒಟ್ಟು ೬೦೦ ಸಸಿಗಳನ್ನು ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ತರಿಸಿ ನೆಟ್ಟಿದ್ದೇನೆ. ಸಸಿ ಉತ್ತಮವಾಗಿ ಬೆಳೆದಿವೆ. ಮಾವು ಫಲ ಕೊಡುವವರೆಗೆ ಪರ್ಯಾಯವಾಗಿ ಪಪ್ಪಾಯಿ ಬೆಳೆಲಾಗಿದ್ದು, ಮೀಯಾ ಜಾಕಿ ಫಲ ಕೊಡುವ ವಿಶ್ವಾಸವಿದೆ ಎಂದು ರೈತ ಬಸವರಾಜ ವಿಶ್ವಾಸ ವ್ಯಕ್ತಪಡಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕುಂದ ಮಾತನಾಡಿ, ಮಾವು ರೈತರಿಗೆ ಅಧಿಕ ಲಾಭ ತಂದು ಕೊಡುವ ಬೆಳೆಯಾಗಿದೆ. ಅದರಲ್ಲಿಯೂ ಜಪಾನ್ ಮೂಲದ ಮಿಯಾ ಜಾಕಿ ಬೆಳೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಜಿಗೆ ₹2ರಿಂದ 2.5 ಲಕ್ಷ ಇದೆ. ವಿಶ್ವದಲ್ಲಿ ಅತಿ ಹೆಚ್ಚು ಬೇಡಿಕೆಯ ಮಾವು ಇದಾಗಿದೆ. ನಮ್ಮ ದೇಶದ ಜನರು ಹೆಚ್ಚಾಗಿ ಈ ಮಾವನ್ನು ಪ್ರಸ್ತುತ ವರ್ಷಗಳಲ್ಲಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ರೈತರ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ. ತರಲಕಟ್ಟಿ ಗ್ರಾಮದ ರೈತ ಬಸವರಾಜ ಮೂರು ಎಕರೆ ಜಮೀನಿನಲ್ಲಿ ೬೦೦ ಸಸಿ ನೆಟ್ಟಿದ್ದು, ಚೆನ್ನಾಗಿ ಬೆಳೆದಿವೆ ಎಂದು ಹೇಳಿದರು.ಈ ಸಂದರ್ಭ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ನಿಂಗನಗೌಡ ಪಾಟೀಲ್ ಇತರರಿದ್ದರು.