ಸಾರಾಂಶ
ಸರ್ಕಾರಿ ಕಚೇರಿಗಳಲ್ಲಿ ಜನ್ಮದಿನಾಚರಣೆ ನಿಷೇಧ ಇದ್ದರೂ ಬೆಳಗಾವಿಯ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಯೊಬ್ಬರು ಕಚೇರಿಯಲ್ಲಿಯೇ ಕೇಕ್ ಕತ್ತರಿಸಿ ತಮ್ಮ ಜನ್ಮದಿನ ಆಚರಿಸಿಕೊಂಡಿರುವುದು ಈಗ ವಿವಾದಕ್ಕೆಡೆ ಮಾಡಿಕೊಟ್ಟಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಸರ್ಕಾರಿ ಕಚೇರಿಗಳಲ್ಲಿ ಜನ್ಮದಿನಾಚರಣೆ ನಿಷೇಧ ಇದ್ದರೂ ಬೆಳಗಾವಿಯ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಯೊಬ್ಬರು ಕಚೇರಿಯಲ್ಲಿಯೇ ಕೇಕ್ ಕತ್ತರಿಸಿ ತಮ್ಮ ಜನ್ಮದಿನ ಆಚರಿಸಿಕೊಂಡಿರುವುದು ಈಗ ವಿವಾದಕ್ಕೆಡೆ ಮಾಡಿಕೊಟ್ಟಿದೆ.ಪ್ರವೀಣ ಮೇತ್ರಿ ಎಂಬುವರು ಸರ್ಕಾರಿ ಕಚೇರಿಯಲ್ಲೇ ಕೇಕ್ ತರಿಸಿ ಎಲ್ಲರ ಸಮ್ಮುಖದಲ್ಲೇ ಜನ್ಮದಿನ ಆಚರಿಸಿಕೊಂಡಿರುವುದು ವೈರಲ್ ಆದ ವಿಡಿಯೋದಿಂದ ತಿಳಿದುಬಂದಿದೆ. ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ, ಖಾಸಗಿ ಕಾರ್ಯಕ್ರಮ ಮಾಡದಂತೆ ಸರ್ಕಾರದ ಆದೇಶವಿದ್ದರೂ, ಸರ್ಕಾರಿ ಆದೇಶವನ್ನು ಧಿಕ್ಕರಿಸಿರುವುದು ಇದರಿಂದ ಸ್ಪಷ್ಟವಾಗಿದೆ.
ಕಚೇರಿಯಲ್ಲಿ ಕೇಕ್ ಕತ್ತರಿಸುವ ವೇಳೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳಿ , ಸಿಬ್ಬಂದಿ, ದಲಿತ ಮುಖಂಡ ಮಲ್ಲೇಶ ಚೌಗಲೆ ಸೇರಿದಂತೆ ಹಲವರು ಬರ್ತಡೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಬರ್ತಡೇ ಕಾರ್ಯಕ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸರ್ಕಾರಿ ಕಚೇರಿಗಳಲ್ಲಿ ನಿಷೇಧವಿದ್ದರೂ ಬರ್ತಡೇ ಆಚರಿಸಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.