ರಾಮನಗರ: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಮತ್ತು ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದ ಮೊದಲ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಆಧಾರಿತ ವಿಶ್ವದರ್ಜೆಯ ಎಐ ಸಿಟಿ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ - ಬಿಡದಿ ಟೌನ್ ಶಿಪ್)ಯ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನ ಹಿಂದೆಯೇ ರೈತರ ಆಕ್ರೋಶ ಭುಗಿಲೆದ್ದಿದೆ
ರಾಮನಗರ: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಮತ್ತು ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದ ಮೊದಲ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಆಧಾರಿತ ವಿಶ್ವದರ್ಜೆಯ ಎಐ ಸಿಟಿ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ - ಬಿಡದಿ ಟೌನ್ ಶಿಪ್)ಯ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನ ಹಿಂದೆಯೇ ರೈತರ ಆಕ್ರೋಶ ಭುಗಿಲೆದ್ದಿದೆ.
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ವಿರೋಧಿಸಿ ಕಳೆದ 400 ದಿನಗಳಿಂದ ಭೂ ಮಾಲೀಕರಾದ ರೈತರು ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಇಲ್ಲಿವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಾಗಲಿ ರೈತರ ಅಹವಾಲು ಆಲಿಸುವ ಪ್ರಯತ್ನವನ್ನೇ ಮಾಡಿಲ್ಲ. ಆದರೀಗ ವಿಶೇಷ ಸಚಿವ ಸಂಪುಟದಲ್ಲಿ ಬಿಡದಿ ಟೌನ್ ಶಿಪ್ ಯೋಜನೆಗೆ ಅನುಮೋದನೆ ನೀಡಿರುವುದು ರೈತರನ್ನು ಕೆರಳಿಸಿದೆ.2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಘೋಷಣೆಯಾಗಿ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಆನಂತರ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಅವಧಿಯಲ್ಲಿ ಟೌನ್ ಶಿಪ್ ಯೋಜನೆ ಪ್ರಕ್ರಿಯೆಗಳು ಹಂತ ಹಂತವಾಗಿ ನಡೆದುಕೊಂಡು ಬಂದಿತ್ತು. ಆಗಿನಿಂದಲೂ ರೈತರು ಹೋರಾಟ ನಡೆಸುತ್ತಲೇ ಬಂದಿದ್ದರು. 20 ವರ್ಷಗಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರ್ಕಾರ ಅಂದಾಜು 18,104 ಕೋಟಿ ರು. ವೆಚ್ಚದಲ್ಲಿ ಒಟ್ಟು 7,481 ಎಕರೆ ಪ್ರದೇಶವನ್ನು ಒಳಗೊಂಡ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಕಾರ್ಯಗತಗೊಳಿಸಲು ಅಧಿಕೃತವಾಗಿ ಅನುಮೋದನೆ ನೀಡಿದೆ.
ಇಂದು ಸಿಎಂ ಬಳಿಗೆ ರೈತರ ನಿಯೋಗ:ಈಗ ರೈತರು ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಚಳವಳಿಯನ್ನು ತೀವ್ರ ಗೊಳಿಸುವ ಜೊತೆಗೆ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಟೌನ್ ಶಿಪ್ ಯೋಜನೆ ಜಾರಿಗೊಳಿಸಲು ಉದ್ದೇಶಿಸಿರುವ ಪ್ರದೇಶ ಹಸಿರು ವಲಯವಾಗಿದ್ದು, 2013ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಸಾಮಾಜಿಕ ಪರಿಣಾಮ ಅಧ್ಯಯನ ಮಾಡಿಲ್ಲ. ಇದನ್ನು ಪ್ರಶ್ನಿಸಿ ರೈತರ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್ 4ರಂದು ಜಿಲ್ಲೆಯವರೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ ಲೋಗೋ ಹಾಗೂ ಕಿರುಹೊತ್ತಿಗೆ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ರೈತರಿಗೆ ಚಳವಳಿ ಹಿಂಪಡೆದು ಯೋಜನೆಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲಿಂದ ಇಲ್ಲಿವರೆಗೆ ಚಳವಳಿನಿರತ ರೈತರ ಅಹವಾಲನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲೇ ಇಲ್ಲ.ಇದೀಗ ವಿಶೇಷ ಸಚಿವ ಸಂಪುಟದಲ್ಲಿ ಟೌನ್ ಶಿಪ್ ಯೋಜನೆಗೆ ಅನುಮೋದನೆ ನೀಡಿರುವುದು ರೈತರ ಆಕ್ರೋಶ ಇಮ್ಮಡಿಗೊಳ್ಳುವಂತೆ ಮಾಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಶುಕ್ರವಾರ (ಮೇ 1) ರೈತರ ನಿಯೋಗ ತೆರಳುತ್ತಿದ್ದು, ಈ ಯೋಜನೆಯಿಂದ ಕೃಷಿ ಭೂಮಿ ಮೇಲಾಗುವ ದುಷ್ಪರಿಣಾಮಗಳ ವಸ್ತುಸ್ಥಿತಿಯನ್ನು ರೈತ ನಾಯಕರು ಮನವರಿಕೆ ಮಾಡಿಕೊಡಲಿದ್ದಾರೆ.
ವಿಪಕ್ಷಗಳ ಹೋರಾಟಕ್ಕೂ ಮಣಿಯದ ಸರ್ಕಾರ:ಬಿಡದಿ ಟೌನ್ ಶಿಪ್‌ಗಾಗಿ ಅಧಿಸೂಚನೆ ಹೊರಡಿಸಿ, ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿ ರೈತರೊಂದಿಗೆ ಬೀದಿಗಿಳಿದು ಹೋರಾಟ ನಡೆಸಿತ್ತು. ಕೇಂದ್ರ ಸಚಿವ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ , ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಚಳವಳಿಯಲ್ಲಿ ಭಾಗವಹಿಸಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಸಂಸದ ಡಾ.ಸಿ.ಎನ್ .ಮಂಜುನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ಪ್ರದೇಶದಲ್ಲಿ ಬಹುಪಾಲು ಕಡು ಬಡವ ರೈತರಿದ್ದು ಜೀವನ ನಿರ್ವಹಣೆಗಾಗಿ ಹೈನುಗಾರಿಕೆ. ರೇಷ್ಮೆ, ತೋಟಗಾರಿಕೆ, ಕೃಷಿಯನ್ನೇ ಅವಲಂಬಿಸಿದ್ದಾರೆ. ಈ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡರೆ ಸಾವಿರಾರು ಜನ ನಿರುದ್ಯೋಗಿಗಳಾಗುವ ಜೊತೆಗೆ ಪರಿಸರ ಹಾಳಾಗಲಿದ್ದು, ಬಿಡದಿ ಟೌನ್ ಶಿಪ್ ಯೋಜನೆ ಕೈಬಿಡುವಂತೆ ಒತ್ತಾಯಿಸಿದ್ದರು.ಆದರೆ, ರಾಜ್ಯ ಸರ್ಕಾರ ವಿಪಕ್ಷಗಳು ಹಾಗೂ ರೈತರ ಹೋರಾಟವನ್ನು ಲೆಕ್ಕಿಸದೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ(ಬಿಡದಿ ಟೌನ್ ಶಿಪ್)ಗೆ ಅನುಮೋದನೆ ನೀಡಿರುವುದರಿಂದ ರೈತರ ಹೋರಾಟ ತೀವ್ರಗೊಳ್ಳುವ ಸಾಧ್ಯತೆಗಳಿವೆ.
ಬಾಕ್ಸ್ ..........ಬಿಡದಿ ಟೌನ್ ಯೋಜನೆ ಸಾಗಿ ಬಂದ ಹಾದಿ:
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಹಿಂದೆ 2006 ರ ಅ.18ರಂದು ರಾಮನಗರ, ಸೋಲೂರು, ನಂದಗುಡಿ, ಸಾತನೂರು ಹಾಗೂ ಬಿಡದಿಯಲ್ಲಿ ಪಿಪಿಪಿ ಮಾದರಿಯಲ್ಲಿ ಟೌನ್ ಶಿಪ್ ಮಾಡಲು ತೀರ್ಮಾನಿಸಿ, ಜಾಗತಿಕ ಟೆಂಡರ್ ಕರೆದಿದ್ದರು. 2007ರ ಅ.26ರಂದು ಡಿಎಲ್ಎಫ್ ಅವರಿಗೆ ವರ್ಕ್ ಆರ್ಡರ್ ಹೊರಡಿಸಿದ್ದರು. ನಂತರ 2009 ಏ.29ರಂದು ಯಡಿಯೂರಪ್ಪನವರು ಇದನ್ನು ಹಿಂಪಡೆದಿದ್ದರು. 2020ರ ಜೂನ್ 1ರಂದು ಎರಡನೇ ಬಾರಿಗೆ ಜಾಗತಿಕ ಟೆಂಡರ್ ಕರೆಯಲಾಯಿತು. 2011 ರ ನ.3ರಂದು ಸದಾನಂದಗೌಡರವರ ಅವಧಿಯಲ್ಲಿ ಪಟ್ಟಣ ಯೋಜನೆ ಕೈಗೆತ್ತಿಕೊಳ್ಳುವಂತೆ ಆದೇಶ ನೀಡಿದ್ದರು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ 38 ಹಳ್ಳಿಗಳನ್ನು ಸೇರಿಸಿ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರದೇಶವನ್ನು ಘೋಷಿಸಿದರು. 2020ರ ಜ. 6ರಂದು ಯಡಿಯೂರಪ್ಪ ಸರ್ಕಾರ 910 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಿ ಕೆಐಎಡಿಬಿಗೆ ನೀಡಿದರು. ನಂತರ 2023ರ ನ.18ರಂದು ಇದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸಲಾಯಿತು. 2024 ರ ಫೆ. 15ರಂದು ಬಜೆಟ್ ನಲ್ಲಿ ಬೆಂಗಳೂರಿನ ಸುತ್ತಮುತ್ತ ಸಮಗ್ರ ಪಟ್ಟಣ ಯೋಜನೆ ತರುವುದಾಗಿ ಘೋಷಿಸಿ, ಬಿಡದಿಯಲ್ಲಿ ಸಮಗ್ರ ಪಟ್ಟಣ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ಸಹ ನೀಡಲಾಯಿತು.2025 ಮಾ.12ರಂದು ಭೂಸ್ವಾಧೀನ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು. ಭೂ ದರ ನಿಗದಿ ಪಡಿಸಿದ ನಂತರ ಭೂ ಸ್ವಾಧೀನ ಪ್ರಕ್ರಿಯೆಯೂ ಆರಂಭಗೊಂಡಿತ್ತು. ಇದೀಗ 2026ರ ಏ.30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ಬಿಡದಿ ಟೌನ್ ಶಿಪ್ ಯೋಜನೆಗೆ ಅಧಿಕೃತ ಮುದ್ರೆ ಹೊತ್ತಿದೆ.
ಕೋಟ್ ........ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಅನುಮೋದನೆ ನೀಡುವ ಮೂಲಕ ಬೆಂಗಳೂರು ಸುತ್ತಮುತ್ತಲಿರುವ ಹಸಿರನ್ನು ನಾಶ ಮಾಡುವ ಪ್ರಕ್ರಿಯೆಗೆ ಮುನ್ನುಡಿ ಬರೆದಿದೆ. ರೈತರಿಂದ ಬಲವಂತವಾಗಿ ಭೂಮಿ ಕಸಿದುಕೊಳ್ಳಲು 2013ರ ಭೂ ಸ್ವಾಧೀನ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. ನಮ್ಮ ಭೂಮಿ ನಮ್ಮ ಹಕ್ಕು. ನಮ್ಮ ಜೀವ ಹೋದರೂ ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.
-ಪ್ರಕಾಶ್ , ರೈತ ಮುಖಂಡರುಕೋಟ್ ....
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಕಾರ್ಯಗತಗೊಳಿಸಲು ವಿಶೇಷ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಅಂತಿಮ ಅಧಿಸೂಚನೆ ಪ್ರಕಟವಾದ ಮೇಲೆ ಕಾನೂನು ಹೋರಾಟ ಆರಂಭಿಸುತ್ತೇವೆ. ಅಲ್ಲಿವರೆಗೆ ಬೀದಿ ಹೋರಾಟ ಮುಂದುವರೆಯಲಿದೆ. ಬಡ ರೈತರ ಕೃಷಿ ಭೂಮಿ ಕಸಿದುಕೊಳ್ಳಲು ಅವಕಾಶ ನೀಡುವುದಿಲ್ಲ.-ಎ.ಮಂಜುನಾಥ್, ಮಾಜಿ ಶಾಸಕರು
30ಕೆಆರ್ ಎಂಎನ್ 7,8.ಜೆಪಿಜಿ7.ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ನಕ್ಷೆ
8.ಎ.ಐ.ಸಿಟಿ ನಿರ್ಮಾಣಗೊಳ್ಳಲಿರುವ ಪ್ರದೇಶ