೩೦ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ: ಎಸ್.ಎಲ್. ಘೊಟ್ನೇಕರ

| Published : Nov 23 2024, 12:33 AM IST

೩೦ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ: ಎಸ್.ಎಲ್. ಘೊಟ್ನೇಕರ
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ನುಡಿದಂತೆ ನಡೆಯುತ್ತಿಲ್ಲ ಎಂದು ಎಸ್.ಎಲ್. ಘೋಟ್ನೇಕರ ಟೀಕಿಸಿದರು.

ಶಿರಸಿ: ಹಳಿಯಾಳ ಕ್ಷೇತ್ರದ ನನ್ನ ಬೆಂಬಲಿಗರು ಬಹುತೇಕ ಬಿಜೆಪಿ ಕಡೆ ಒಲವು ಹೊಂದಿದ್ದಾರೆ. ಈಗಾಗಲೇ ಕೆಲವರು ಬಿಜೆಪಿ ಸೇರ್ಪಡೆಗೊಂಡಿದ್ದು, ಕಾರ್ಯಕರ್ತರು ಹಾಗೂ ಬೆಂಬಲಿಗರ ಒತ್ತಾಯದ ಮೇರೆಗೆ ಬಿಜೆಪಿಗೆ ನ. 30ರಂದು ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದೇನೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಲ್. ಘೋಟ್ನೇಕರ ತಿಳಿಸಿದರು.ಶುಕ್ರವಾರ ನಗರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ತಮ್ಮ ಬೆಂಬಲಿಗರ ಜತೆ ಭೇಟಿಯಾದ ವೇಳೆ ಮಾಧ್ಯಮದವರ ಜತೆ ಮಾತನಾಡಿ, ಜೆಡಿಎಸ್‌ ಮೇಲೆ ಬೇಜಾರಿಲ್ಲ. ಹಳಿಯಾಳ ಭಾಗದ ಮೂಲ ಬಿಜೆಪಿಗರು ನನ್ನ ಸೇರ್ಪಡೆಗೆ ಒಪ್ಪಿಕೊಂಡಿದ್ದಾರೆ. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿದ್ದೆ. ಈ ಹಿಂದೆ ಕಾಂಗ್ರೆಸ್ ತೊರೆದಾಗಲೇ ಬಿಜೆಪಿ ಸೇರಬೇಕಿತ್ತು. ಆದರೆ ಕೆಲ ಕಾರಣಕ್ಕೆ ಜೆಡಿಎಸ್ ಸೇರುವಂತಾಗಿತ್ತು. ಈಗ ಬಿಜೆಪಿ ಸೇರಿ ಮುಂಬರುವ ಎಲ್ಲ ಚುನಾವಣೆಯಲ್ಲಿ ಹಳಿಯಾಳದಲ್ಲಿ ಬಿಜೆಪಿ ಬಾವುಟ ಹಾರಿಸಲು ಪ್ರಯತ್ನ ಮಾಡಲಾಗುವುದು ಎಂದರು. ಜನರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ನುಡಿದಂತೆ ನಡೆಯುತ್ತಿಲ್ಲ ಎಂದು ಟೀಕಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಸರಿ ಶಾಲು ಹಾಕಿ ಎಸ್.ಎಲ್. ಘೊಟ್ನೇಕರ ಅವರನ್ನು ಸ್ವಾಗತಿಸಿದರು. ನಂತರ ಮಾತನಾಡಿದ ವಿಶ್ವೇಶ್ವರ ಹೆಗಡೆ, ಈಗಾಗಲೇ ಬಿಜೆಪಿ ಸೇರ್ಪಡೆ ವಿಚಾರ ಚರ್ಚಿಸಲಾಗಿದೆ. ನನ್ನ ಗೆಲುವಿನಲ್ಲಿ ಸುನೀಲ ಹೆಗಡೆ ಜತೆ ಘೊಟ್ನೇಕರ್ ಸಹಕಾರ ಸಾಕಷ್ಟಿದೆ. ಮರಾಠಾ ಸಮುದಾಯದ ನಾಯಕರಾಗಿರುವ ಅವರು ಬಿಜೆಪಿ ಸೇರ್ಪಡೆ ಆಗುತ್ತಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ತರಲಿದೆ ಎಂದರು.

ರೈತರ ಪ್ರಗತಿಗೆ ನೆರವಾದ ಸಹಕಾರ ಸಂಘಗಳು

ಯಲ್ಲಾಪುರ: ಬೆಳೆಗಳನ್ನು ಬಾಧಿಸುವ ವಿವಿಧ ಬಗೆಯ ಕ್ರಿಮಿ, ಕೀಟಗಳ ನಿಯಂತ್ರಣ ರೈತರಿಗೆ ಅತ್ಯಂತ ಸಮಸ್ಯೆಯಾಗಿದ್ದು, ಇಸ್ರೇಲಿನ ಕೀಬುಟ್ಸ್ ಕೈಗೊಂಡ ಕ್ರಮಗಳು ನಮಗೆ ಪರಿಹಾರದ ಮಾದರಿಯಾಗಬೇಕಿದೆ ಎಂದು ಶಿರಸಿಯ ನೆಲಸಿರಿ ರೈತ ಉತ್ಪಾದಕರ ಸಂಸ್ಥೆಯ ನಿರ್ದೇಶಕ ನಾರಾಯಣ ಹೆಗಡೆ ಗಡಿಕೈ ತಿಳಿಸಿದರು.ನ. ೧೮ರಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯುನಿಯನ್ ಕುಮಟಾ, ಸಹಕಾರ ಇಲಾಖೆ, ಕೆಡಿಸಿಸಿ ಬ್ಯಾಂಕ್ ಶಿರಸಿ, ಕುಂದರಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಭರತನಹಳ್ಳಿ ಮತ್ತು ಯಲ್ಲಾಪುರ, ಮುಂಡಗೋಡ ತಾಲೂಕಿನ ಸಹಕಾರಿ ಸಂಘಗಳ ಆಶ್ರಯದಲ್ಲಿ ಭರತನಹಳ್ಳಿಯ ಕುಂದರಗಿ ವಿ.ಪ್ರಾ.ಗ್ರಾ.ಕೃ.ಸ. ಸಂಘದ ಆವಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ನಮ್ಮ ಜಿಲ್ಲೆಯ ಸಹಕಾರಿ ಸಂಘಗಳು ರೈತರಿಗೆ ಕಲ್ಪಿಸುತ್ತಿರುವ ವಿವಿಧ ಬಗೆಯ ವ್ಯವಸ್ಥೆಗಳು ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲೂ ಲಭ್ಯವಾಗದು. ನಮ್ಮಲ್ಲಿ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಅಗತ್ಯವಿರುವ ಅನೇಕ ಸೌಲಭ್ಯಗಳನ್ನು ಜಿಲ್ಲೆಯ ಬಹುತೇಕ ಸಂಘಗಳು ಪೂರೈಸುತ್ತಿವೆ ಎಂದರು.

ಕುಂದರಗಿ ಸೇ.ಸ. ಸಂಘದ ಅಧ್ಯಕ್ಷ ಎಚ್.ಪಿ. ಹೆಗಡೆ ಭರತನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕುಮಟಾದ ಜಿಲ್ಲಾ ಸಹಕಾರಿ ಯುನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ನಾಯಕ ಸ್ವಾಗತಿಸಿದರು. ಶಿಕ್ಷಕರಾದ ಆದಿತ್ಯ ಶಂಕರ ನಿರ್ವಹಿಸಿದರು. ಪ್ರಕಾಶ ಭಟ್ಟ ವಂದಿಸಿದರು.