ಸಾರಾಂಶ
ಕಾರವಾರ: ಇಲ್ಲಿನ ತಾಪಂನಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಗೆ ಕೆಲವು ಇಲಾಖೆ ಅಧಿಕಾರಿಗಳು ಆಗಮಿಸದೇ ಇರುವುದಕ್ಕೆ ಶಾಸಕ ಸತೀಶ ಸೈಲ್ ಅಸಮಾಧಾನ ಹೊರಹಾಕಿದರು. ಕೂಡಲೇ ಗೈರಾಗಿರುವ ಅಧಿಕಾರಿಗಳನ್ನು ಕರೆಸುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು. ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಬೇಕು. ಇಲ್ಲವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಿತಾ ಪೆಡ್ನೆಕರ ಮಾತನಾಡಿ, ಹಳಗಾ ಹಾಗೂ ಕದ್ರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿಯೋಜನೆಯಾಗಿದೆ. ೫ ಲ್ಯಾಬ್ ಟೆಕ್ನಿಷಿಯನ್, ೨೩ ಕಿರಿಯ ಪುರುಷ ಆರೋಗ್ಯ ಸಹಾಯಕ ಹುದ್ದೆ ಖಾಲಿಯಿದೆ ಎಂದು ಹೇಳಿದರು. ಶಾಸಕರು ಹುದ್ದೆ ಭರ್ತಿಗೆ ಕ್ರಮವಹಿಸಲು ಸೂಚಿಸಿದರು.ಸಾರಿಗೆ ಸಂಸ್ಥೆ ಚಾಲಕರೊಬ್ಬರು ಪ್ರಯಾಣಿಕರೊಂದಿಗೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಮನಸ್ಥಿತಿ ಇರುವವರನ್ನು ಕೆಲಸದಲ್ಲಿ ಇಟ್ಟುಕೊಳ್ಳಬೇಡಿ ಎಂದು ಸಾರಿಗೆ ಸಂಸ್ಥೆ ಡಿಪೋ ವ್ಯವಸ್ಥಾಪಕರಿಗೆ ಶಾಸಕ ಸತೀಶ ಸೈಲ್ ತಾಕೀತು ಮಾಡಿದರು.ಆ ಬಾಗಿಲಲ್ಲಿ ಇಳಿಯಿರಿ, ಈ ಬಾಗಿಲಲ್ಲಿ ಇಳಿಯಿರಿ ಎನ್ನಲು ಅವನು ಯಾರು? ಪ್ರಯಾಣಿಕರಿಗೆ ಬಸ್ ಏರಲು, ಇಳಿಯಲು ಅನುಕೂಲವಾಗಲಿ ಎಂದೇ ಎರಡು ಬಾಗಿಲು ಇಡುತ್ತಾರೆ. ಅಲ್ಲೇ ಹತ್ತಿ, ಇಲ್ಲೇ ಹತ್ತಿ, ಆ ಬಾಗಿಲಲ್ಲಿ ಇಳಿಯಿರಿ ಎನ್ನುವ ಅಧಿಕಾರ ಅವನಿಗಿದೆಯೇ? ಇದನ್ನು ಪ್ರಶ್ನಿಸಿದವರಿಗೆ ಬೆದರಿಕೆ ಹಾಕಿರುವುದು ಗಮನಕ್ಕೆ ಬಂದಿದೆ. ಆ ಚಾಲಕನನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಎಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಪೋ ವ್ಯವಸ್ಥಾಪಕಿ ಸೌಮ್ಯಾ ನಾಯಕ, ಆ ಚಾಲಕರನ್ನು ವರ್ಗಾವಣೆ ಮಾಡಲಾಗಿದೆ. ಮುಂದೆ ಯಾರೂ ಈ ರೀತಿ ವರ್ತಿಸದಂತೆ ಎಲ್ಲರಿಗೂ ಸೂಚಿಸಲಾಗಿದೆ ಎಂದ ಅವರು, ಶಕ್ತಿ ಯೋಜನೆಯಡಿ ₹೩೧ ಕೋಟಿ ಆದಾಯ ಬಂದಿದೆ ಎಂದರು.ಪಿಎಂಜಿಎಸ್‌ವಾಯ್ ಯೋಜನೆಯಡಿ ನಿರ್ಮಾಣವಾದ ರಸ್ತೆಯನ್ನು ೫ ವರ್ಷ ನಿರ್ವಹಣೆ ಮಾಡಬೇಕೆಂದಿದೆ. ಆದರೆ ನಿರ್ವಹಣೆಯಾಗುತ್ತಿಲ್ಲ. ಈ ರೀತಿ ಆಗಬಾರದು ಎಂದರು.ತಹಸೀಲ್ದಾರ್ ನಿಶ್ಚಲ್ ನರೋನ್ಹ, ಪೌರಾಯುಕ್ತ ಜಗದೀಶ ಹುಲಗೆಜ್ಜಿ, ತಾಪಂ ಆಡಳಿತಾಧಿಕಾರಿ ಸೋಮಶೇಖರ ಮೇಸ್ತಾ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ರಾಜೇಂದ್ರ ರಾಣೆ ಇದ್ದರು.ಕಾಂಗ್ರೆಸ್ ಶಾಸಕರ ನಡುವೆ ಕಿತ್ತಾಟ ಮುಂದುವರಿಕೆ
ಕಾರವಾರ: ಅಧಿಕಾರಿಯ ವರ್ಗಾವಣೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ನಡುವೆ ಕಿತ್ತಾಟ ಮುಂದುವರಿದಿದೆ.ಈ ಬಾರಿ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ವಿರುದ್ಧ ಕಾರವಾರ ಶಾಸಕ ಸತೀಶ ಸೈಲ್ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ತಮ್ಮ ಗಮನಕ್ಕೆ ಇಲ್ಲದೆ ಹೆಸ್ಕಾಂನ ಎಇಇ ವೀರಣ್ಣ ಶೇಬಣ್ಣವರ್ ವರ್ಗಾವಣೆ ಮಾಡಿರುವುದಕ್ಕೆ ಸತೀಶ ಸೈಲ್ ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರೋಶನಿ ಅವರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನಾನು ಹಳಿಯಾಳ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತೇನಾ? ಹಾಗಿದ್ದರೆ ಹಳಿಯಾಳದವರು ನನ್ನ ಕ್ಷೇತ್ರದಲ್ಲಿ ಏಕೆ ಹಸ್ತಕ್ಷೇಪ ಮಾಡುತ್ತಾರೆ. ನನ್ನ ಕ್ಷೇತ್ರದಲ್ಲಿ ಬೇರೆಯವರು ಬಂದು ರಾಜಕೀಯ ಮಾಡುತ್ತಿದ್ದಾರೆ. ನಾವು ಜನರಿಂದ ಹೇಳಿಸಿಕೊಳ್ಳಬೇಕಾಗಿದೆ ಎಂದು ಸೈಲ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಹೆಸ್ಕಾಂ ಹಿರಿಯ ಅಧಿಕಾರಿಗೂ ದೂರವಾಣಿ ಕರೆ ಮಾಡಿ ಅಸಮಾಧಾನ ಹೊರಹಾಕಿದರು. ಈ ಹಿಂದೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ವರ್ಗಾವಣೆಯಾದಾಗಲೂ ಕಾಂಗ್ರೆಸ್ ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಈಗ ಬಹಿರಂಗವಾಗಿ ಹೇಳುವಂತಾಗಿದೆ.