ವಿಬಿಜಿ ರಾಮ್ ಜಿ ವಿಸ್ತರಣೆ ಹಾಗೂ ಭಾರತ್‌ ಜೋಡೋ ಯುವ ಸೇನೆ ಸಿದ್ಧಪಡಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗ್ರಾಪಂ ಮಟ್ಟದ ಅಧಿಕಾರಿಗಳು ಶ್ರದ್ಧೆ ವಹಿಸುವಂತೆ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಆದೇಶಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ವಿಬಿಜಿ ರಾಮ್ ಜಿ ವಿಸ್ತರಣೆ ಹಾಗೂ ಭಾರತ್‌ ಜೋಡೋ ಯುವ ಸೇನೆ ಸಿದ್ಧಪಡಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗ್ರಾಪಂ ಮಟ್ಟದ ಅಧಿಕಾರಿಗಳು ಶ್ರದ್ಧೆ ವಹಿಸುವಂತೆ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಆದೇಶಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ವಿಶೇಷ ಬರ ನಿರ್ವಹಣೆ ಸಭೆಯಲ್ಲಿ ಮಾತನಾಡಿದ ಅವರು, ಸತತ ಮಳೆಯ ಅಭಾವದ ಪರಿಣಾಮ ಬೆಳೆನಷ್ಟಕ್ಕಿಡಾಗಿದೆ. ರೈತ ಹಾಗೂ ಕೂಲಿಕಾರರ ಜೀವನ ಕ್ಲಿಷ್ಟಕರವಾಗಿದೆ. ಕುಡಿಯುವ ನೀರು ಹಾಗೂ ಜಾನುವಾರಗಳ ಮೇವಿನ ಸಮಸ್ಯೆ ಎದುರಾಗಿದೆ. ಬರ ನಿರ್ವಹಣೆಗೆ ಸರ್ಕಾರ ಕಾರ್ಯನ್ಮುಖವಾಗಿದ್ದು, ತಾಲೂಕಿನ ಸಮಗ್ರ ಮಾಹಿತಿ ನೀಡುವ ಮೂಲಕ ಬರ ನಿರ್ವಹಣೆಗೆ ಬದ್ಧರಾಗುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.ವಿಬಿಜಿ ರಾಮ್ ಜಿ ವಿಸ್ತರಣೆ ಭಾರತ್ ಜೋಡೋ ಯುವ ಸೇನೆ ಇತರೆ ಜನಪರ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು. ತಾಲೂಕಿನ ಜನತೆಗೆ ಅಗತ್ಯ ಸೌಲಭ್ಯ ಹಾಗೂ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ತಲುಪುವಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕರು ಸೂಚಿಸಿದರು. ನಗರ ಹಾಗೂ ಗ್ರಾಮೀಣ ಭಾಗದ ಅನೇಕ ಮಂದಿ ಕಡು ಬಡವರು ಆತಂತ್ರ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ದವಾಗಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 10 ಸಾವಿರ ನಿವೇಶನ ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿದೆ. ಹೀಗಾಗಿ,ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಮೀನುಗಳನ್ನು ಪತ್ತೆ ಹಚ್ಚಿ ವರದಿ ನೀಡಬೇಕು. ಮಂದಿನ ಸೆ.10ರೊಳಗೆ ಸರ್ಕಾರಿ ವ್ಯಾಪ್ತಿಗೆ ಒಳಪಟ್ಟ ನಿವೇಶನ ಕುರಿತು ವಿವರ ಸಲ್ಲಿಸುವಂತೆ ಪುರಸಭೆ ಮುಖ್ಯಾಧಿಕಾರಿ ಕಂದಾಯ ಇಲಾಖೆ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಶುದ್ಧ ಕುಡಿಯುವ ನೀರಿನ ಸಮಸ್ಯೆ ಕುರಿತು ಅನೇಕ ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆ ಜಿಪಂ ಹಾಗೂ ಗ್ರಾಪಂ ಅಧಿಕಾರಿಗಳು ಹೆಚ್ಚು ಆಸಕ್ತಿವಹಿಸಿ ಕೆಲಸ ಮಾಡಬೇಕು. ಜಿಪಂ ಹಾಗೂ ಇತರೆ ಖಾಸಗಿ ವ್ಯಾಪ್ತಿಯಲಿರುವ ಶುದ್ಧ ನೀರಿನ ಘಟಕಗಳನ್ನು ಗ್ರಾಪಂ ವಶಕ್ಕೆ ಪಡೆದು ಯಾವುದೇ ರೀತಿಯ ಸಮಸ್ಯೆ ಅಗದಂತೆ ತಾಲೂಕಿನ ಜನತೆಗೆ ಕುಡಿಯುವ ನೀರು ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಬೃಹತ್‌ ಟ್ಯಾಂಕ್‌ಗಳಿಗೆ ಸರಬರಾಜ್‌ ಆಗಿದ್ದ ತುಂಗಭದ್ರಾ ಯೋಜನೆಯ ನೀರು ಪ್ರತಿ ವಾರ್ಡ್ ಗಳಿಗೂ ಪೂರೈಕೆ ಮಾಡುತ್ತಿರುವುದಾಗಿ ಪುರಸಭೆ ಮುಖ್ಯಾಧಿಕಾರಿ ಜಾಫರ್‌ ಷರೀಪ್‌ ಹೇಳಿದರು. ಎತ್ತಿನಹಳ್ಳಿ,ಕೃಷ್ಣಗಿರಿ ಇತರೆ ಗ್ರಾಮಗಳಲ್ಲಿ ಸಮಸ್ಯೆಗಳಿದ್ದು, ನಿವಾರಣೆ ಆಗಬೇಕು ಇಲ್ಲದಿದ್ದರೆ ನೀವೆ ಹೊಣೆ ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ತಹಸೀಲ್ದಾರ್‌ ವೈ.ರವಿ,ತಾಪಂ ಇಒ ಮದುಸೂಧನ್‌.ಸಿಪಿಐ ಸುರೇಶ್‌ಗೌಡ, ಸಾಮಾಜಿಕ ವಲಯದ ಆರಣ್ಯಾಧಿಕಾರಿ ರಾಕೇಶ್, ಜಿಪಂ ಸಹಾಯಕ ಎಂಜಿನಿಯರ್‌ ಬಸವಲಿಂಗಪ್ಪ,ಭೂ ಸೇನಾ ನಿಗಮದ ಮಹದೇವಪ್ಪ, ಗ್ರಾಪಂ ಪಿಡಿಒಗಳಾದ ಚಿನ್ನಪ್ಪ,ವೈ.ಎನ್‌.ಹೊಸಕೋಟೆ ಮಂಜುನಾಥ್‌,ನಾಗಲಮಡಿಕೆ ಹನುಮಂತರಾಯಪ್ಪ, ಅರಸೀಕೆರೆ ಮಂಜುನಾಥ್‌,ಮರಿದಾಸನಹಳ್ಳಿ ಮುದ್ದರಂಗಪ್ಪ ಇತರರಿದ್ದರು.