ಬೆಳೆ ಸಮೀಕ್ಷೆಯಲ್ಲಿ ತಪ್ಪಾದರೆ ಅಧಿಕಾರಿಗಳೇ ಹೊಣೆ

| Published : Oct 29 2024, 12:52 AM IST

ಸಾರಾಂಶ

ಹೊಸದುರ್ಗ: ಹೊಸ ರಾಗಿ ಮಾರುಕಟ್ಟೆಗೆ ಬರುವುದರೊಳಗೆ ಶ್ರೀರಾಂಪುರ ಉಪ ಮಾರುಕಟ್ಟೆಯಲ್ಲಿ ಗೋಡೋನ್‌ ಹಾಗೂ ವೇ ಬ್ರಿಡ್ಜ್‌ ಕಾಮಗಾರಿ ಪೂರ್ಣಗೊಳಿಸಬೇಕು. ಎಂಎಸ್‌ಪಿ ದರದಲ್ಲಿ ರಾಗಿ ಖರೀದಿಸಲು ಹೊಸದುರ್ಗದಲ್ಲಿ 2 ಹಾಗೂ ಶ್ರೀರಾಂಪುರದಲ್ಲಿ 2 ನೋಂದಣಿ ಕೇಂದ್ರವನ್ನು ತೆರೆಯಬೇಕು. ಅದಕ್ಕೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಸಿದ್ಧತೆಮಾಡಿಕೊಳ್ಳಬೇಕು ಎಂದು ಶಾಸಕ ಬಿಜಿ ಗೋವಿಂದಪ್ಪ ಅವರು ಎಪಿಎಂಸಿ ಕಾರ್ಯದರ್ಶಿಗೆ ತಾಕೀತು ಮಾಡಿದರು.

ಹೊಸದುರ್ಗ: ಹೊಸ ರಾಗಿ ಮಾರುಕಟ್ಟೆಗೆ ಬರುವುದರೊಳಗೆ ಶ್ರೀರಾಂಪುರ ಉಪ ಮಾರುಕಟ್ಟೆಯಲ್ಲಿ ಗೋಡೋನ್‌ ಹಾಗೂ ವೇ ಬ್ರಿಡ್ಜ್‌ ಕಾಮಗಾರಿ ಪೂರ್ಣಗೊಳಿಸಬೇಕು. ಎಂಎಸ್‌ಪಿ ದರದಲ್ಲಿ ರಾಗಿ ಖರೀದಿಸಲು ಹೊಸದುರ್ಗದಲ್ಲಿ 2 ಹಾಗೂ ಶ್ರೀರಾಂಪುರದಲ್ಲಿ 2 ನೋಂದಣಿ ಕೇಂದ್ರವನ್ನು ತೆರೆಯಬೇಕು. ಅದಕ್ಕೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಸಿದ್ಧತೆಮಾಡಿಕೊಳ್ಳಬೇಕು ಎಂದು ಶಾಸಕ ಬಿಜಿ ಗೋವಿಂದಪ್ಪ ಅವರು ಎಪಿಎಂಸಿ ಕಾರ್ಯದರ್ಶಿಗೆ ತಾಕೀತು ಮಾಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಸುಮಾರು 25 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಸುಮಾರು 3.50 ಲಕ್ಷ ಕ್ವಿಂಟಾಲ್‌ ರಾಗಿ ಇಳುವರಿ ಬರುವ ನಿರೀಕ್ಷೆ ಹೊಂದಲಾಗಿದೆ ಎಂದು ಸಹಾಯಕ ಕೃಷಿ ನಿರ್ದೆಶಕ ಸಿ.ಎಸ್‌.ಈಶ ಸಭೆಗೆ ತಿಳಿಸಿದ್ದಾರೆ. ಹಾಗಾಗಿ ಈ ಬಾರಿ ರಾಗಿ ಪ್ರಗತಿಯಲ್ಲಿದೆ ಎಂದು ಉತ್ತರ ನೀಡುವ ಬದಲು ರಾಗಿ ಖರೀದಿ ಕೇಂದ್ರದ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಿ ಎಂದು ಸೂಚಿಸಿದರು.

ಬೆಳೆ ಸಮೀಕ್ಷೆ ಮಾಡುವ ಗ್ರಾಮ ಲೆಕ್ಕಾಧಿಕಾರಿಗಳು ಅಥವಾ ನಿಯೋಜಿತ ವ್ಯಕ್ತಿಗಳು ರೈತರ ಜಮೀನುಗಳಿಗೆ ತೆರೆಳದೆ ಒಂದು ಕಡೆ ಕುಳಿತು ಸರ್ವೇ ಮಾಡುತ್ತಿರುವ ದೂರುಗಳು ಬರುತ್ತಿವೆ. ಅಲ್ಲದೆ ಸರ್ವೆ ವೇಳೆ ಸರಿಯಾಗಿ ಬೆಳೆ ದಾಖಲು ಮಾಡದೆ ರೈತರು ಸರ್ಕಾರದ ಸವಲತ್ತು ಪಡೆಯಲು ತೊಂದರೆಯಾಗುತ್ತಿದೆ. ಹಾಗಾಗಿ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಈ ಬಗ್ಗೆ ತಮ್ಮ ಸಿಬ್ಬಂದಿಗೆ ಸರಿಯಾಗಿ ಸೂಚನೆ ನೀಡಬೇಕು. ಇಲ್ಲವಾದರೆ ಇನ್ನು ಮುಂದೆ ಈ ರೀತಿಯ ದೂರು ಮರುಕಳಿಸಿದರೆ ನೇರವಾಗಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ಎಚ್ಚರಿಸಿದರು.

ಡಿಪೋಗಳಲ್ಲಿ ಬಸ್‌ ನಿಲ್ಲಿಸಬೇಡಿ: ರಾತ್ರಿ ವೇಳೆ ಬಸ್‌ಗಳನ್ನು ಡಿಪೋಗಳಲ್ಲಿ ನಿಲ್ಲಿಸದೆ ಗ್ರಾಮೀಣ ಪ್ರದೇಶಗಳಲ್ಲಿ ತಂಗುವಂತಾಗಬೇಕು. ಇದರಿಂದ ಬೆಳಗ್ಗೆ ನಗರ ಪ್ರದೇಶಗಳಿಗೆ ಬರುವ ರೈತರು ಸೇರಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಇತ್ತೀಚಿಗೆ ಗ್ರಾಮೀಣ ಪ್ರದೇಶಕ್ಕೆ ಬಸ್‌ ಓಡಿಸಲು ಹೊಸ ಬಸ್‌ಗಳನ್ನು ಡಿಪೋ ನೀಡಲಾಗಿದೆ ಆದರೆ ಅವುಗಳನ್ನು ನಗರ ಪ್ರದೆಶಗಳಿಗೆ ಓಡಿಸುವುದು ಸರಿಯಲ್ಲ. ಈ ಬಗ್ಗೆ ಸಾಕಷ್ಟು ಬಾರಿ ನಿಮಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. ಬೇಜವಾಬ್ದಾರಿ ಬಿಟ್ಟು ಕೆಲಸ ಮಾಡಿ ಎಂದು ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗದ ಡೀಸಿಗೆ ಸೂಚಿಸಿದರು.

ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಿ: ತಾಲೂಕಿನಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಮೂರು ತಿಂಗಳಲ್ಲಿ 16 ಬಾಲ್ಯ ವಿವಾಹಗಳಾಗಿದ್ದು, ಅವುಗಳಲ್ಲಿ 3 ಪ್ರಕರಣಗಳಿಗೆ ಮಾತ್ರ ಎಫ್‌ಐಆರ್‌ ಆಗಿದೆ ಎಂದು ಸಿಡಿಪಿಓ ಅಭಿಲಾಶ ಸಭೆಗೆ ತಿಳಿಸಿದಾಗ ಶಾಸಕರು ಮಾತನಾಡಿ, ತಿಂಗಳಲ್ಲಿ 5-6 ಇಂತಹ ಪ್ರಕರಣಗಳು ನನ್ನ ಬಳಿ ಬರುತ್ತಿವೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಹಾಗೂ ಶಿಕ್ಷಕರ ಸಹಾಯ ಪಡೆದು ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಹೆಚ್ಚು ಮಾಡಬೇಕು ಎಂದು ಸೂಚಿಸಿದರು.

ಬೀದಿ ನಾಯಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳಿ: ಕಳೆದ 3 ತಿಂಗಳಲ್ಲಿ 1500 ನಾಯಿ ಕಡಿತದ ಪ್ರಕರಣ ದಾಖಲಾಗಿವೆ. ಇತ್ತೀಚಿಗೆ ನಾಯಿ ಕಡಿತದಿಂದ 3 ಮಕ್ಕಳು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಹತ್ತಾರು ಕುರಿ ಮೇಕೆಗಳು ಸಾವನ್ನಪ್ಪಿದ್ದಾವೆ. ಇನ್ನೂ ಹೆಚ್ಚಿನ ಅನಾವುತಗಳು ಆಗುವ ಮುನ್ನವೇ ಪಶು ಇಲಾಖೆ ಹಾಗೂ ಸ್ಥಳೀಯ ಗ್ರಾಪಂ ಜಂಟಿಯಾಗಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.

ಬೆಸ್ಕಾಂ ಇಲಾಖೆಗೆ 3-4 ಕೋಟಿ ಅನುದಾನ ನೀಡಿದ್ದೇನೆ. ಇದುವರೆವಿಗೂ ಒಂದು ನಯಾ ಪೈಸೆ ಖರ್ಚಾಗಿಲ್ಲ. ಹಳ್ಳಿಗಳಲ್ಲಿ ಜನರು ನನ್ನನ್ನು ಬೈಯ್ಯುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ ಶಾಸಕರು, ಶೀಘ್ರವಾಗಿ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದು, ಬೀದಿ ದೀಪಗಳಿಗೆ ಅನುಕೂಲವಾಗುವಂತೆ ಕಂಬ ಹಾಗೂ ಲೈನ್‌ಗಳನ್ನು ಎಳೆಯುವಂತೆ ಬೆಸ್ಕಾಂ ಎಇಇ ಗಳಿಗೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್‌ ತಿರುಪತಿ ಪಾಟೀಲ್‌, ತಾಪಂ ಇಓ ಸುನಿಲ್‌ ಕುಮಾರ್‌, ಆಡಳಿತಾಧಿಕಾರಿ ಶಂಕ್ರಪ್ಪ ಪತ್ತಾರ್‌ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.ವಿವಿ ಸಾಗರ ಜಲಾಶಯದಿಂದ ಹಿನ್ನಿರಿನ ಗ್ರಾಮಗಳಿಗೆ ಹಾಗೂ ತಾಲೂಕಿನ ಹಲವು ಕೆರೆಗಳಿಗೆ ನೀರು ತರುವ ಸಂಬಂಧ ಶೀಘ್ರದಲ್ಲಿಯೇ ಡಿಪಿಆರ್‌ ಮಾಡಿಸಲಾಗುವುದು. ನನ್ನ ವಿರುದ್ಧ ಮಾತನಾಡಿರುವ ರೈತ ಮುಖಂಡರಿಗೆ ನಮ್ಮ ತಾಲೂಕಿನ ರೈತರಿಂದಲೇ ಉತ್ತರ ಕೊಡಿಸುತ್ತೇನೆ. ನೀರಿನ ವಿಚಾರದಲ್ಲಿ ನನಗೆ ರಾಜಕಾರಣ ಮಾಡಲು ಇಷ್ಟವಿಲ್ಲ. ನನ್ನ ತಾಲೂಕಿನ ಜನರ ಹಿತ ಕಾಪಾಡುವುದು ನನ್ನ ಕರ್ತವ್ಯ. ಇದಕ್ಕೆ ಯಾವತರನಾದ ಹೋರಾಟಕ್ಕೂ ನಾನು ಸಿದ್ಧನಿದ್ದೇನೆ

- ಬಿಜಿ ಗೋವಿಂದಪ್ಪ, ಶಾಸಕರು