ಸಾರಾಂಶ
ಕುಷ್ಟಗಿ: ಬಾಡಿಗೆ ವಾಪತಿಸದ ತಾಪಂ ಮಾರಾಟ ಮಳಿಗೆಗಳಿಗೆ ಶನಿವಾರ ಜಿಪಂ ಉಪಕಾರ್ಯದರ್ಶಿ, ತಾಪಂ ಅಧಿಕಾರಿಗಳು ಬೀಗ ಜಡಿದು ಚುರುಕು ಮುಟ್ಟಿಸಿದ ಘಟನೆ ನಡೆಯಿತು.
ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ನೇತೃತ್ವದಲ್ಲಿ ತಾಪಂ ಸಿಬ್ಬಂದಿ ಹಾಗೂ ಪೋಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.ಮಾರಾಟ ಮಳಿಗೆಗಳಿಂದ ತಾಪಂಗೆ ₹ 32,88,150 ಬಾಡಿಗೆ ಬಾಕಿ ಇದೆ. ಬಾಕಿ ಉಳಿಸಿಕೊಂಡ ಅಂಗಡಿ ಮಾಲೀಕರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಶನಿವಾರ ಬಾಕಿ ಉಳಿಸಿಕೊಂಡ ಕೆಲವು ಮಳಿಗೆಗಳಿಗೆ ಬೀಗ ಜಡಿದು ಬಾಕಿ ಉಳಿಸಿಕೊಂಡ ಬಾಡಿಗೆದಾರರಿಗೆ ಬಿಸಿ ಮುಟ್ಟಿಸಿದರು.ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಾಪಂ ಆಡಳಿತ ವ್ಯಾಪ್ತಿಗೆ ಒಳಪಡುವ ಮಾರಾಟ ಮಳಿಗೆಗಳ ಬಾಡಿಗೆ ಕಟ್ಟುವಂತೆ ಹಲವು ಸಲ ನೋಟಿಸ್ ನೀಡಿದ್ದರೂ ಬಾಡಿಗೆ ಪಾವತಿಸದ ಹಿನ್ನೆಲೆ ಇಂದು ಬೀಗ ಹಾಕಲಾಗಿದೆ. ಮುಂದಿನ ದಿನಮಾನಗಳಲ್ಲಿ ಈ ಮಾರಾಟ ಮಳಿಗೆಗಳನ್ನು ಮರು ಟೆಂಡರ್ ಕರೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಪಂ ನರೇಗಾ ಸಹಾಯಕ ನಿಂಗನಗೌಡ ಹಿರೇಹಾಳ, ಪೊಲೀಸ್ ಅಧಿಕಾರಿ ತಾಯಪ್ಪ ಸೇರಿದಂತೆ ತಾಪಂ ಅಧಿಕಾರಿಗಳು ಇದ್ದರು.