ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವ ವಿಚಾರದಲ್ಲಿ ನೀರಾವರಿ ಮತ್ತು ಗಣಿ ಇಲಾಖೆ ಅಧಿಕಾರಿಗಳು ಮೊಂಡಾಟ ಪ್ರದರ್ಶಿಸುತ್ತಿದ್ದು, ಪರೀಕ್ಷಾರ್ಥ ಸ್ಫೋಟ ನಡೆಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದವರಂತೆ ಕಂಡುಬರುತ್ತಿದ್ದಾರೆ. ಜು.೫ರ ಹೈಕೋರ್ಟ್ ನೀಡಬಹುದಾದ ನಿರ್ದೇಶನದಂತೆ ನಡೆಯುವುದಾಗಿ ನಿನ್ನೆಯಷ್ಟೇ ಹೇಳಿದ್ದ ನೀರಾವರಿ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಪೊಲೀಸ್ ಕಾವಲಿನಲ್ಲಿ ಕುಳಿಗಳನ್ನು ನಿರ್ಮಿಸುವುದಕ್ಕೆ ಗಣಿ ಇಲಾಖೆ ಅಧಿಕಾರಿಗಳಿಗೆ ಬೆಂಬಲವಾಗಿ ನಿಂತಿದ್ದಾರೆ.ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ವ್ಯಾಪ್ತಿಯಲ್ಲಿರುವ ಗಣಿಗಾರಿಕೆ ಪ್ರದೇಶಗಳಲ್ಲಿ ಪರೀಕ್ಷಾರ್ಥ ಸ್ಫೋಟಕ್ಕೆ ಕುಳಿಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ ರೇಷ್ಮಾ ಅವರು ಖುದ್ದು ನಿಂತು ಕುಳಿಗಳ ನಿರ್ಮಾಣದ ಮೇಲುಸ್ತುವಾರಿ ವಹಿಸಿದ್ದಾರೆ. ನೀರಾವರಿ ಇಲಾಖೆಯವರು ದೂರದಲ್ಲೇ ನಿಂತು ಪರೀಕ್ಷಾರ್ಥ ಸ್ಫೋಟಕ್ಕೆ ಪರೋಕ್ಷ ಬೆಂಬಲ ನೀಡುತ್ತಲೇ ಟ್ರಯಲ್ ಬ್ಲಾಸ್ಟ್ ವಿರೋಧಿಸುತ್ತಿರುವ ರೈತ ಹೋರಾಟಗಾರರಿಗೆ ಗಣಿ ಇಲಾಖೆ ಅಧಿಕಾರಿಗಳನ್ನು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ರಾತ್ರೋರಾತ್ರಿ ನಿಲುವು ಬದಲು:ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಮಂಗಳವಾರ ಕೆಆರ್‌ಎಸ್ ಎಂಜಿನಿಯರಿಂಗ್ ಕಚೇರಿ ಎದುರು ರೈತಸಂಘ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ ಸಮಯದಲ್ಲಿ ನೀರಾವರಿ ಇಲಾಖೆ ಅಧೀಕ್ಷಕ ಎಂಜಿನಿಯರ್ ರಘುರಾಮ್ ಅವರು ಜು.೫ರಂದು ಹೈಕೋರ್ಟ್‌ನಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಬರಲಿದ್ದು, ನ್ಯಾಯಾಲಯ ನೀಡಬಹುದಾದ ನಿರ್ದೇಶನವನ್ನು ಆಧರಿಸಿ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದ್ದರು. ಅಧೀಕ್ಷಕ ಎಂಜಿನಿಯರ್ ಮಾತನ್ನು ನಂಬಿ ರೈತರು ಗೋ-ಬ್ಯಾಕ್ ಚಳವಳಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆದುಕೊಂಡಿದ್ದರು.
ಗಣಿಗಾರಿಕೆಗೆ ಅವಕಾಶ ನೀಡುವ ಗುರಿ:ರಾಜಕೀಯ ಮತ್ತು ಗಣಿ ಮಾಲೀಕರ ಒತ್ತಡಕ್ಕೆ ಮಣಿದಂತೆ ಕಂಡುಬಂದಿರುವ ರಾತ್ರಿ ವೇಳೆಗೆ ನಿಲುವನ್ನು ಬದಲಿಸಿದ ನೀರಾವರಿ ಮತ್ತು ಗಣಿ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಪೊಲೀಸ್ ರಕ್ಷಣೆಯನ್ನು ಪಡೆದುಕೊಂಡು ಬೇಬಿಬೆಟ್ಟದಲ್ಲಿ ಕುಳಿಗಳನ್ನು ನಿರ್ಮಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಟ್ರಯಲ್ ಬ್ಲಾಸ್ಟ್ ನಡೆಸಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿಕೊಡುವುದು ಎರಡೂ ಇಲಾಖೆಯವರ ಮುಖ್ಯ ಗುರಿಯಾಗಿದೆ ಎಂದು ರೈತಸಂಘದ ಕಾರ್ಯಕರ್ತರು ಆರೋಪಿಸಿದ್ದಾರೆ.
ಟ್ರಯಲ್ ಬ್ಲಾಸ್ಟ್ ಪರ ಪ್ರತಿಭಟನೆ:ಇದೇ ವೇಳೆ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಒತ್ತಾಯಿಸಿ ರಾಜ್ಯ ರೈತಸಂಘ (ರೈತ ಬಣ) ಕಾರ್ಯಕರ್ತರು ಕೆಆರ್‌ಎಸ್ ಬಳಿ ಪ್ರತಿಭಟನೆ ನಡೆಸಿದರು. ಮಹಾರಾಜರ ಕಾಲದಿಂದಲೂ ಗಣಿಗಾರಿಕೆ ನಡೆದುಕೊಂಡು ಬಂದಿದ್ದು, ಕೆಆರ್‌ಎಸ್ ಅಣೆಕಟ್ಟೆಯ ಸುರಕ್ಷತೆಯ ಆತಂಕದಿಂದಾಗಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದ್ದು, ಗಣಿಗಾರಿಕೆಯಿಂದಾಗುವ ದುಷ್ಪರಿಣಾಮಗಳ ಸತ್ಯಾಸತ್ಯತೆಯನ್ನು ಅರಿಯಲು ಟ್ರಯಲ್ ಬ್ಲಾಸ್ಟ್ ಮಾಡಿ ನೈಜ ವರದಿಯನ್ನು ಸಾರ್ವಜನಿಕರ ಮುಂದಿಡುವ ಪ್ರಯತ್ನವಾಗಬೇಕಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯಿಸಿದರು.
ಕೆಲವರು ರಾಜಕೀಯ ಕಾರಣಕ್ಕಾಗಿ ಟ್ರಯಲ್ ಬ್ಲಾಸ್ಟ್‌ಗೆ ಅಡ್ಡಿ ಉಂಟುಮಾಡುತ್ತಿದ್ದಾರೆ. ಇದರ ಸತ್ಯಾಸತ್ಯತೆ ಹೊರಬರುವ ಮುನ್ನವೇ ಅದರ ಸಾಧಕ-ಬಾಧಕಗಳನ್ನು ಕಲ್ಪನೆ ಮಾಡಿಕೊಂಡು ಯಾವುದನ್ನೂ ತೀರ್ಮಾನಿಸಲು ಸಾಧ್ಯವಾಗುವುದಿಲ್ಲ ಎಂದರು.ಬೇಬಿ ಬೆಟ್ಟದಲ್ಲಿ ೨೦೦ಕ್ಕೂ ಹೆಚ್ಚು ಪೊಲೀಸರ ನಿಯೋಜನೆಕೆಆರ್ಎಸ್ ಸಮೀಪದ ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಸಕಲ ಸಿದ್ಧತೆಗಳು ನಡೆದಿದ್ದು, ಮುಂಜಾಗ್ರತೆಯಾಗಿ ಸುಮಾರು ೨೦೦ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ರೈತರ ತೀವ್ರ ವಿರೋಧದ ನಡುವೆಯೂ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ಮುಂದಾಗಿದ್ದು, ಜಾರ್ಖಂಡ್‌ನಿಂದ ವಿಜ್ಞಾನಿಗಳು ಆಗಮಿಸುವುದಕ್ಕೂ ಮುನ್ನವೇ ಕಲ್ಲು ಕ್ವಾರೆಗಳಲ್ಲಿ ಕುಳಿ ಕೊರೆಯುವ ಕಾರ್ಯವನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಸಲಾಗುತ್ತಿದೆ. ಗಣಿ ಅಧಿಕಾರಿಗಳೇ ಖುದ್ದು ಮುಂದೆ ನಿಂತು ಆಯ್ದ ಸ್ಥಳಗಳಲ್ಲಿ ಕುಳಿ ಕೊರೆಸುತ್ತಿದ್ದಾರೆ. ಕುಳಿಗಳಿಗೆ ಸ್ಫೋಟಕಗಳನ್ನು ತುಂಬಿ ತಜ್ಞರು ಟ್ರಯಲ್ ಬ್ಲಾಸ್ಟ್ ಮಾಡಲಿದ್ದಾರೆ. ಇನ್ನೆರಡು ದಿನಗಳಲ್ಲಿ ಕೆಆರ್‌ಎಸ್‌ಗೆ ಜಾರ್ಖಂಡ್ ವಿಜ್ಞಾನಿಗಳ ತಂಡ ಆಗಮಿಸಲಿದ್ದು, ಬಹುಶಃ ಜು.೭ರಂದು ಟ್ರಯಲ್ ಬ್ಲಾಸ್ಟ್ ನಡೆಯುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ವಿಜ್ಞಾನಿಗಳಿಂದ ೫ ಸ್ಥಳ ನಿಗದಿಕೆಆರ್ಎಸ್ ಅಣೆಕಟ್ಟೆಗೆ ಕೂಗಳತೆ ದೂರದಲ್ಲಿ ಟ್ರಯಲ್ ಬ್ಲಾಸ್ಟ್‌ನ ಸಿದ್ಧತಾ ಕಾರ್ಯಗಳು ನಡೆದಿದ್ದು, ವಿಜ್ಞಾನಿಗಳು ನಿಗದಿಪಡಿಸಿರುವ ಐದು ಸ್ಥಳಗಳಲ್ಲಿ ಕುಳಿಗಳನ್ನು ನಿರ್ಮಿಸಲಾಗುತ್ತಿದೆ. ಅಣೆಕಟ್ಟೆಗೆ ಸಮೀಪವಿರುವ ಸ್ಥಳಗಳಲ್ಲಿ ೨೦ ರಿಂದ ೨೩ ಅಡಿ ಕುಳಿಗಳು ಹಾಗೂ ಅಣೆಕಟ್ಟೆಯಿಂದ ದೂರ ನಿಗದಿಯಾಗಿರುವ ಸ್ಥಳಗಳಲ್ಲಿ ೬೦ ಅಡಿವರೆಗೂ ಕುಳಿಗಳನ್ನು ನಿರ್ಮಿಸಲಾಗುತ್ತಿದೆ. ಈ ಕುಳಿಗಳಿಗೆ ಸ್ಫೋಟಕಗಳನ್ನು ತುಂಬಿ ಜಾರ್ಖಂಡ್ ವಿಜ್ಞಾನಿಗಳ ತಂಡ ಟ್ರಯಲ್ ಬ್ಲಾಸ್ಟ್ ನಡೆಸಲಿದೆ. ವಿಜ್ಞಾನಿಗಳ ತಂಡ ಪರೀಕ್ಷಾರ್ಥ ಸ್ಫೋಟ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯ ಇದೆಯೋ, ಇಲ್ಲವೋ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರೇಷ್ಮಾ ಮಾಹಿತಿ ನೀಡಿದರು.ಜು.೭ರಂದು ಪರೀಕ್ಷಾರ್ಥ ಸ್ಫೋಟ ಸಂಭವ
ಕೆಆರ್‌ಎಸ್ ಅಣೆಕಟ್ಟೆ ಸಮೀಪವಿರುವ ಬೇಬಿಬೆಟ್ಟದಲ್ಲಿ ಪರೀಕ್ಷಾರ್ಥ ಸ್ಫೋಟ ಜು.೭ರಂದು ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ನೀರಾವರಿ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮೂರು ದಿನಾಂಕಗಳನ್ನು ನಿಗದಿಪಡಿಸಿದ್ದು, ಅದರಲ್ಲಿ ಜು.೭ ಕೂಡ ಒಂದಾಗಿದೆ. ಜು.೬ರಂದು ರಾತ್ರಿ ಜಾರ್ಖಂಡ್‌ನಿಂದ ವಿಜ್ಞಾನಿಗಳ ತಂಡ ಆಗಮಿಸಿ ಜು.೭ರಂದು ಬೆಳಗ್ಗೆಯೇ ಸ್ಥಳಗಳಿಗೆ ಭೇಟಿಕೊಟ್ಟು ಟ್ರಯಲ್ ಬ್ಲಾಸ್ಟ್ ನಡೆಸಿ ವಾಪಸ್ ತೆರಳಲಿದೆ. ಆನಂತರ ಸರ್ಕಾರಕ್ಕೆ ವಿಜ್ಞಾನಿಗಳ ತಂಡ ವರದಿ ಸಲ್ಲಿಸಬಹುದೆಂದು ಹೇಳಲಾಗುತ್ತಿದೆ.