ಸಾರಾಂಶ
ಗೋಕರ್ಣ: ಗಂಗಾವಳಿ- ಮಂಜುಗುಣಿ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿ ಅಡ್ಡಲಾಗಿ ನಿರ್ಮಿಸಿದ ಸೇತುವೆ ಕೂಡು ರಸ್ತೆ ನಿರ್ಮಾಣ ಕಾರ್ಯದ ಸ್ಥಳಕ್ಕೆ ಕೆಆರ್‌ಡಿಸಿಎಲ್‌ನ ಅಧಿಕಾರಿಗಳು, ಗುತ್ತಿಗೆ ಕಂಪನಿಯವರು ಗುರುವಾರ ಭೇಟಿ ನೀಡಿ ಸಾರ್ವಜನಿಕರೊಂದಿಗೆ ರಸ್ತೆಯ ಜಾಗ ಮತ್ತಿತರ ಮಾಹಿತಿ ನೀಡಿ ಚರ್ಚಿಸಿದರು. ಬುಧವಾರ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗಂಗಾವಳಿ ಭಾಗದಲ್ಲಿ ಕೂಡು ರಸ್ತೆಗೆ ನಿಖರ ಸ್ಥಳ ತಿಳಿಸುವಂತೆ ಆಗ್ರಹಿಸಿದ್ದರು. ಅದರಂತೆ ಅಧಿಕಾರಿಗಳು ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು.
ಈ ಮೊದಲು ರಸ್ತೆ ನಿರ್ಮಿಸುವ ನೀಲನಕ್ಷೆಯಂತೆ ಮುಂದುವರಿಸಿ ಆದರೆ ಕಲ್ಲುಬಂಡೆಯನ್ನು ತೆಗೆದು ತಿರುವು ಇರುವ ಮಾರ್ಗವನ್ನು ನೇರವಾಗಿ ಮಾರ್ಪಡಿಸಿ ನಂತರ ಸ್ಥಳೀಯರಿಗೆ ಸರಿಯಾದ ಗುರುತು ಹಾಕಿಕೊಡುವಂತೆ ಆಗ್ರಹಿಸಿದರು.ತಿರುವು ಇರುವ ರಸ್ತೆಯನ್ನು ನೇರ ಮಾಡುವುದು, ಖಾಸಗಿ ಜಾಗ ಪಡೆಯುವ ಬದಲು ಶಾಂತಿಕಾ ಪರಮೇಶ್ವರಿ ಮಂದಿರದ ಹತ್ತಿರದ ಗ್ರಾಮ ಪಂಚಾಯಿತಿ ಜಾಗದಲ್ಲಿ ರಸ್ತೆ ಮುಂದುವರಿಸಲು ನಿರ್ಧರಿಸಲಾಯಿತು. ಈ ಮಾರ್ಗದಲ್ಲಿರುವ ಮಹಾಸತಿ ಮಂದಿರವನ್ನು ತೆರವು ಮಾಡಿ ಬೇರೆ ಜಾಗದಲ್ಲಿ ಪ್ರತಿಷ್ಠಾಪಿಸಲು ಒಪ್ಪಿದ್ದು, ಅದರಂತೆ ನೂತನ ರಸ್ತೆಯ ನೀಲನಕ್ಷೆಯ ವಿವರವನ್ನು ಜನರಿಗೆ ತಿಳಿಸಿ ಗಟಾರದ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಮಾಡಿಕೊಡುವುದು ಸೇರಿದಂತೆ ಜನರ ಹಲವು ಬೇಡಿಕೆಗೆ ಗುತ್ತಿಗೆ ಕಂಪನಿ ಒಪ್ಪಿದ್ದು, ನಿಗದಿತ ಅವಧಿಯಲ್ಲಿ ಸೇತುವೆ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ. ಆದರೆ ಜನರು ಸಹಕಾರ ನೀಡುವಂತೆ ಕೆಆರ್‌ಡಿಸಿಎಲ್‌ನ ಅಧಿಕಾರಿಗಳು ಮನವಿ ಮಾಡಿದರು. ಇನ್ನು ಸೇತುವೆ ಕೆಲಸ ಪೂರ್ಣಗೊಳಿಸುವ ವೇಳೆ ನಿತ್ಯ ಸಂಚರಾಕ್ಕೆ ಬೋಟ್ ಪ್ರಾರಂಭಿಸುವುದು ಬೇಡ. ಬದಲಾಗಿ ಏಣಿ ನಿರ್ಮಿಸಿ ಕೊಡಬೇಕು ಎಂದು ಜನರು ಹೇಳಿದಾಗ ಅದಕ್ಕೆ ಒಪ್ಪಿದ ಕಂಪನಿಯವರು ಜನರು ಎಚ್ಚರಿಕೆಯಿಂದ ಓಡಾಡಬೇಕು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಗೌಡ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ನಾಯ್ಕ, ಸದಸ್ಯರು, ಕೆಆರ್‌ಡಿಸಿಎಲ್‌ನ ಸುಹಾಸ್ ನಾಯ್ಕವಾಡ್, ಎಂಜಿನಿಯರ್ ಬಸವರಾಜ್, ಸೆಕ್ಷನ್ ಆಫೀಸರ್ ಸುಧೀರ ಮೇತ್ರಿ, ಗ್ರಾಪಂ ಅಭಿವೃದ್ದಿ ಅಧಿಕಾರಿ, ಕಾರ್ಯದರ್ಶಿ ಇತರರು ಇದ್ದರು.ಕುಶಲ ಕನ್ಯಾ ಸ್ಪರ್ಧೆ ವಿಜೇತರಿಗೆ ಬಹುಮಾನ
ಶಿರಸಿ: ನಗರದ ಎಂಇಎಸ್ ವಾಣಿಜ್ಯ ಕಾಲೇಜಿನ ಮಹಿಳಾ ಸಂಘವು ಆಯೋಜಿಸಿದ್ದ ಕುಶಲ ಕನ್ಯಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನ. ೨೫ರಿಂದ ೨೯ರ ವರೆಗೆ ನಡೆದ ಸ್ಪರ್ಧಾ ಸರಣಿಯಲ್ಲಿ ವಿದ್ಯಾರ್ಥಿನಿಯರು ತಮ್ಮ ಕಲೆ, ಸೃಜನಶೀಲತೆ ಮತ್ತು ಪ್ರತಿಭೆ ಮೆರೆಯುವ ಅವಕಾಶ ಪಡೆದುಕೊಂಡರು. ಈ ಸ್ಪರ್ಧೆಗಳು ರಂಗೋಲಿ, ಮೆಹಂದಿ, ಕೂದಲು ಅಲಂಕಾರ, ಬಾಟಲ್ ಪೇಂಟಿಂಗ್, ಆರತಿ ತಟ್ಟೆ ಅಲಂಕಾರ ಮತ್ತು ಮಂಡಲಾ ಕಲೆ ಎಂಬ ವಿಭಾಗಗಳಲ್ಲಿ ನಡೆದವು.ಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕುಮುದಾ ಶರ್ಮಾ ಮಾತನಾಡಿದರು. ಪ್ರಿಯಾ ವಿ. ಮಾರಥೆ, ಅಕ್ಷತಾ ನಾಯ್ಕ ಮತ್ತು ಉಮಾ ಪಾಟೀಲ್ ಸೇರಿದಂತೆ ಮತ್ತಿತರರು ಸ್ಪರ್ಧೆಗಳ ಮೌಲ್ಯಮಾಪನ ಮಾಡಿದರು.ಮಂಡಲಾ ಕಲೆಯಲ್ಲಿ ಶ್ರೇಯಾ ಜಿ. ಹೆಗಡೆ ಪ್ರಥಮ, ಚೈತ್ರಾ ಆಚಾರ್ಯ ದ್ವಿತೀಯ, ಸೌಜನ್ಯಾ ಹೆಗಡೆ ತೃತೀಯ, ರಂಗೋಲಿಯಲ್ಲಿ ಮೇಧಾ ಭಟ್ ಪ್ರಥಮ, ಸಂಜನಾ ಶೇಟ್ ದ್ವಿತೀಯ, ಪೂಜಾ ಪಾಟ್ಗರ್ ಮತ್ತು ಹರ್ಷಿತಾ ಹೆಗಡೆ ತೃತೀಯ, ರಂಗೋಲಿ(ಬಿಂದುಗಳೊಂದಿಗೆ) ಶ್ರುತಿ ಆರ್. ಹೆಗಡೆ ಪ್ರಥಮ, ರಕ್ಷಿತಾ ಆಚಾರ್ಯ ದ್ವಿತೀಯ, ಅರ್ಪಿತಾ ರಾಯ್ಕರ್ ತೃತೀಯ, ಬಾಟಲ್ ಪೇಂಟಿಂಗ್‌ನಲ್ಲಿ ಸಂಜನಾ ಶೇಟ್ ಪ್ರಥಮ, ಮಂದಾರಾ ನಾಯ್ಕ ದ್ವಿತೀಯ, ಸ್ಫೂರ್ತಿ ಹೆಬ್ಬಾರ ತೃತೀಯ, ಕೂದಲು ಶೈಲಿಯಲ್ಲಿ ಕವನಾ ಭಟ್ ಪ್ರಥಮ, ಹೀರಲ್ ಪಟೇಲ್ ದ್ವಿತೀಯ, ಮೆಹಂದಿಯಲ್ಲಿ ಸಿಂಧು ಭಟ್ ಪ್ರಥಮ, ಕೀರ್ತಿ ವಡಗೇರಿ ದ್ವಿತೀಯ, ಅಮೂಲ್ಯ ದಾಮೋದರ್ ಮತ್ತು ಸೌಜನ್ಯಾ ಹೆಗಡೆ ತೃತೀಯ, ಆರತಿ ತಟ್ಟೆ ಅಲಂಕಾರದಲ್ಲಿ ಅನುಷಾ ಗುಡಿಗಾರ್ ಪ್ರಥಮ, ತೇಜಸ್ವಿನಿ ನಾಯ್ಕ ದ್ವಿತೀಯ, ಸಂಜನಾ ಶೇಟ್ ತೃತೀಯ ಸ್ಥಾನ ಪಡೆದರು.