ತುಂಗಭದ್ರಾ ಎಡದಂಡೆ ಕಾಲುವೆಯಿಂದ ಕೆಲವು ಪ್ರಭಾವಿಗಳು ಅಕ್ರಮವಾಗಿ ಪೈಪ್ ಜೋಡಣೆ ಮಾಡಿ ನೀರು ಬಳಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ತ್ವರಿತಗತಿಯ ಕಾರ್ಯಾಚರಣೆ ಮಾಡಿ, ಕಿತ್ತು ಹಾಕಿದ್ದಾರೆ.

ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆಯಿಂದ ಕೆಲವು ಪ್ರಭಾವಿಗಳು ಅಕ್ರಮವಾಗಿ ಪೈಪ್ ಜೋಡಣೆ ಮಾಡಿ ನೀರು ಬಳಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ತ್ವರಿತಗತಿಯ ಕಾರ್ಯಾಚರಣೆ ಮಾಡಿ, ಕಿತ್ತು ಹಾಕಿದ್ದಾರೆ.ತಾಲೂಕಿನ ದಾಸನಾಳ ತುಂಗಭದ್ರಾ ಕಾಲುವೆಯ ನಂ. 20ರಿಂದ 24 ಮೇಲ್‌ನಲ್ಲಿ ಕೆಲವು ಪ್ರಭಾವಿ ರೈತರು ನಾಲೆಯ ಒಳಗೆ ರಂಧ್ರ ಕೊರೆದು ತಮ್ಮ ಗದ್ದೆಗಳಿಗೆ ಪೈಪ್ ಜೋಡಣೆ ಮಾಡಿಕೊಂಡಿರುವುದನ್ನು ಗಮನಿಸಿದ ಅಧಿಕಾರಿಗಳು, ಜೆಸಿಬಿ ಮೂಲಕ ಪೈಪ್‌ಗಳನ್ನು ಕಿತ್ತು ಹಾಕಿದ್ದಾರೆ. 10ಕ್ಕೂ ಹೆಚ್ಚು ರೈತರ ಗದ್ದೆಗಳಿಗೆ ಹಾಕಿದ ಪೈಪ್‌ಗಳನ್ನು ನೆಲಸಮ ಮಾಡಿದ್ದಾರೆ.

ಕೆಳ ಭಾಗದ ರೈತರ ಪರದಾಟ: ಕಾಲುವೆಗೆ ನೀರು ಬಿಡುಗಡೆ ಮಾಡಿ 20 ದಿನ ಕಳೆದರೂ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ಬಾರದ ಕಾರಣ ರೈತರು ಪರದಾಡಿದ್ದಾರೆ. ಮುನಿರಾಬಾದ್ 0 ಮೈಲ್‌ನಿಂದ ರಾಯಚೂರು ಪ್ರದೇಶಕ್ಕೆ ನೀರು ತಲುಪದ ಕಾರಣ ಇನ್ನು ಭತ್ತ ನಾಟಿ ಮಾಡದೆ ನೀರಿಗಾಗಿ ಕಾಯ್ದು ಕುಳಿತಿದ್ದಾರೆ. ಉಪ ಕಾಲುವೆಗಳಿಗೆ ನೀರು ಪೂರೈಕೆಯಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಪೈಪ್ ಜೋಡಣೆಯಿಂದ ನೀರು ಪೂರೈಕೆ ವ್ಯತ್ಯಯ: ಕೇವಲ ಗಂಗಾವತಿ ಭಾಗದಲ್ಲಿ ಅಕ್ರಮ ಪೈಪ್‌ ಜೋಡಣೆ ಅಲ್ಲದೆ ಸೋಮನಾಳ, ಮೈಲಾಪುರ, ಚಿಕ್ಕಡಂಕನಕಲ್, ಮೈಲಾಪುರ, ಕಾರಟಗಿ ಭಾಗದಲ್ಲಿ ಕೆಲವು ಪ್ರಭಾವಿ ರೈತರು ಅಕ್ರಮ ಪೈಪ್‌ಗಳ ಜೋಡಣೆ ಮಾಡಿಕೊಂಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅಕ್ರಮ ಪೈಪ್‌ ಜೋಡಣೆ ಮಾಡಿದವರ ಮೇಲೆ ಜಲಸಂಪನ್ಮೂಲ ಇಲಾಖೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಯಂತ್ರಗಳನ್ನು ಜಪ್ತಿ ಮಾಡಿದ್ದರು. ಆದರೆ ಈಗ ಕೇವಲ ಕಾರ್ಯಾಚರಣೆ ನಡೆಸಿ ಪೈಪ್‌ ತೆರವುಗೊಳಿಸಿದ್ದರಿಂದ ಮತ್ತೆ ಪೈಪ್‌ ಹಾಕಿಕೊಳ್ಳುವ ಸಾಧ್ಯತೆ ಇದೆ ಎಂದು ಕೆಳ ಭಾಗದ ರೈತರ ಆರೋಪವಾಗಿದೆ.

ಕಾರ್ಯಾಚರಣೆಯಲ್ಲಿ ಜಲಸಂಪನ್ಮೂಲ ಇಲಾಖೆ ಎಸ್.ಇ. ಶ್ರೀನಿವಾಸ ಮಲ್ಲಿಗೆವಾಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಅಮರೇಶ ಕಂಪ್ಲಿ ಹಾಗೂ ಜೆಸ್ಕಾಂ, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.