ಸಾರಾಂಶ
ಮಸ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಶಾಸಕರು ಸೂಚನೆ. ಮಸ್ಕಿಯ ಕನ್ನಾಳ ಗ್ರಾಪಂ ವ್ಯಾಪ್ತಿಯ ಕನ್ನಾಳ, ಮೂಡಲದಿನ್ನಿ, ಸುಲ್ತಾನಪೂರು ಗ್ರಾಮಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ಹಮ್ಮೊಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಮಸ್ಕಿ
ಸರ್ಕಾರ ಇರುವುದೇ ಜನರ ಸಮಸ್ಯೆಗಳನ್ನು ಪರಿಹರಿಸಲು ಆದ್ದರಿಂದ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳು ಬಂದಲ್ಲಿ ತಕ್ಷಣ ಸ್ಪಂದಿಸಿ ನಿವಾರಿಸಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಅಧಿಕಾರಿಗಳಿಗೆ ಸೂಚಿಸಿದರು.ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನ್ನಾಳ ಗ್ರಾಪಂ ವ್ಯಾಪ್ತಿಯ ಕನ್ನಾಳ, ಮೂಡಲದಿನ್ನಿ, ಸುಲ್ತಾನಪೂರು ಗ್ರಾಮಗಳಲ್ಲಿ ಶನಿವಾರ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಜನಸ್ಪಂದನಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಭೆಯಲ್ಲಿ ಎಲ್ಲಾ ತಾಲೂಕು ಅಧಿಕಾರಿಗಳು ಇರುವುದರಿಂದ ಸರ್ಕಾರ ನಿಮ್ಮ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಅನೂಕೂಲವಾಗಲೆಂದು ಜನರ ಮನೆ ಬಾಗಿಲಿಗೆ ಸರ್ಕಾರ ಬಂದಿದೆ. ನೀವು ಸಮಸ್ಯೆಗಳನ್ನು ತಿಳಿಸಿ, ಸ್ಥಳದಲ್ಲಿಯೇ ನಿವಾರಿಸುವ ಪ್ರಯತ್ನ ಮಾಡಲಾಗುವುದು. ಆದ್ದರಿಂದ ಸರ್ವಾಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಮನವಿ ಮಾಡಿದರು.ಅಧಿಕಾರಿಗಳು ಮುಖ್ಯವಾಗಿ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ರೀತಿಯಿಂದ ಕ್ರಮ ಕೈಗೊಳ್ಳಬೇಕು. ರೈತರಿಗೆ ಅನೂಕೂಲವಾಗಲೆಂದು ಸರ್ಕಾರ ಬರಪೀಡಿತ ಪ್ರದೇಶದ ರೈತರ ಖಾತೆಗೆ 2000 ರುಪಾಯಿಗಳನ್ನು ಅತಿ ಶೀಘ್ರದಲ್ಲಿಯೇ ಜಮಾ ಮಾಡಲಿದೆ. ಯಾವುದೇ ಕಾರಣಕ್ಕೂ ರೈತರು ಆತಂಕಕ್ಕೆ ಒಳಗಾಗಬೇಡಿ. ರೈತರೊಂದಿಗೆ ಸರ್ಕಾರ ಇದೆ. ಅಲ್ಲದೇ ದುಡಿಯುವ ಕೈಗಳಿಗೆ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಸರಿಯಾಗಿ ಕೇಲಸಗಳನ್ನು ನೀಡಿ ಇದರಿಂದ ಜನರು ಮಹಾನಗರಗಳಿಗೆ ಗುಳೆ ಹೋಗುವುದು ತಪ್ಪಿಸಬಹುದು. ಆದ್ದರಿಂದ ಅದಿಕಾರಿಗಳು ಸಾರ್ವಜನಿಕರ ಸಮಸ್ಯೆ ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದರು.
ಈ ಸಂದರ್ಭ ತಹಸೀಲ್ದಾರ್ ಅರಮನೆ ಸುಧಾ, ತಾಪಂ ಇಒ ಉಮೇಶ, ಜೆಸ್ಕಾಂ ಎಇಇ ವೇಂಕಟೇಶ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜು ಪಾಟೀಲ್ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ಮಹಿಬೂಬ್ಸಾಬ್ ಮುದ್ದಾಪೂರು, ಆದನಗೌಡ ಸಂತೆಕಲ್ಲೂರು, ಹಳ್ಳಿ ಮಲ್ಲಮಗೌಡ್ರು ಸೇರಿದಂತೆ ಇತರರು ಇದ್ದರು.